ವಿಶ್ವಸಂಸ್ಥೆ (ಅಮೆರಿಕ): ತಾಲಿಬಾನ್ ಉಗ್ರರ ರಣಕೇಕೆಗೆ ಅಫ್ಘಾನಿಸ್ತಾನ ನಲುಗಿ ಹೋಗಿದೆ. ಅಫ್ಘಾನಿಸ್ತಾನದಲ್ಲಿ ಜಾಗತಿಕ ಭಯೋತ್ಪಾದನೆ ಬೆದರಿಕೆ ನಿಗ್ರಹಿಸಲು ವಿಶ್ವದ ಎಲ್ಲ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕರೆ ನೀಡಿದ್ದಾರೆ.
"ನಾವು ಅಫ್ಘಾನಿಸ್ತಾನದ ಜನರನ್ನು ಕೈಬಿಡಲು ಸಾಧ್ಯವಿಲ್ಲ. ಅವರನ್ನು ಬೆಂಬಲಿಸಲು ವಿಶ್ವಸಂಸ್ಥೆ (UN) ಬದ್ಧವಾಗಿದೆ. ಅಂತಾರಾಷ್ಟ್ರೀಯ ಸಮುದಾಯವು ಒಟ್ಟಾಗಿ ನಿಲ್ಲುವ ಸಮಯವಿದು. ಮಾನವ ಹಕ್ಕುಗಳನ್ನು ಎತ್ತಿ ಹಿಡಿಯಲು ನಾವು ಒಗ್ಗಟ್ಟಾಗಬೇಕು" ಎಂದು ಅವರು ಟ್ವೀಟ್ ಮೂಲಕ ಹೇಳಿದ್ದಾರೆ.
"ತಾಲಿಬಾನ್ ನಿಯಂತ್ರಣಕ್ಕೆ ಬಂದಿರುವ ಪ್ರದೇಶಗಳಲ್ಲಿ ನಾವು ಸಿಬ್ಬಂದಿಯನ್ನು ನಿಯೋಜಿಸಿ, ಕಚೇರಿಗಳನ್ನು ಮುಂದುವರಿಸುತ್ತೇವೆ. ಅಫ್ಘಾನ್ ಜನರ ಅಗತ್ಯದ ಸಮಯದಲ್ಲಿ ನಾವು ಬೆಂಬಲಕ್ಕೆ ನಿಲ್ಲುತ್ತೇವೆ. ಅಲ್ಲಿ ನಡೆಯುತ್ತಿರುವ ಘಟನೆಗಳನ್ನು ಜಗತ್ತು ಭಾರವಾದ ಹೃದಯದಿಂದ ನೋಡುತ್ತಿದೆ. ಎಲ್ಲಾ ದೇಶಗಳು ಅಫ್ಘಾನ್ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಬೇಕಿದೆ" ಎಂದು ನುಡಿದರು.
ಈ ಹಿಂದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಅಫ್ಘಾನಿಸ್ತಾನವನ್ನು ಎಂದಿಗೂ ಭಯೋತ್ಪಾದಕ ಸಂಘಟನೆಗಳಿಗೆ ವೇದಿಕೆಯಾಗಿ ಅಥವಾ ಸುರಕ್ಷಿತ ತಾಣವಾಗಿ ಬಳಸದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದಿದ್ದರು.
ಅಘ್ಘನ್ ಸ್ಥಿತಿಗೆ ಭಾರತ ಕಳವಳ:ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ವಿಶ್ವಸಂಸ್ಥೆಯಲ್ಲಿ ಭಾರತ ಕಳವಳ ವ್ಯಕ್ತಪಡಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಘಟನೆಗಳು ನಿಜಕ್ಕೂ ದುರದೃಷ್ಟಕರ. ಮಹಿಳೆಯರು ಮಕ್ಕಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಏರ್ಪೋರ್ಟ್ನಲ್ಲಿ ಗುಂಡು ಹಾರಿಸಿದ ಘಟನೆಗಳು ನಡೆದಿರೋದು ನಿಜಕ್ಕೂ ಆತಂಕಕಾರಿ ವಿಚಾರ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.