ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮ ಗೋಷ್ಠಿಗಳಲ್ಲಿ ಮಾತನಾಡುತ್ತಿರುವಾಗ ಅವರ ಹಿಂದೆ ತೆಳ್ಳನೆಯ ವ್ಯಕ್ತಿಯೊಬ್ಬ ನಿಂತುಕೊಂಡಿರುವುದನ್ನು ನೀವು ಗಮನಿಸಿರಬಹುದು. ಅನೇಕ ಸಲ ಸಭೆಗಳಲ್ಲಿ, ಮಾಧ್ಯಮ ಗೋಷ್ಠಿಗಳಲ್ಲಿ ಅಧ್ಯಕ್ಷ ಟ್ರಂಪ್ ಏನಾದರೂ ತಪ್ಪು ಮಾತನಾಡಿದರೆ ತಕ್ಷಣ ಪಕ್ಕಕ್ಕೆ ಬರುವ ಈ ವ್ಯಕ್ತಿ ಅಧ್ಯಕ್ಷರಿಗೆ ಸರಿಯಾದ ಮಾಹಿತಿಯನ್ನು ಹೇಳುತ್ತಾನೆ. ಅಧ್ಯಕ್ಷ ಟ್ರಂಪ್ ಕೂಡ ಸೌಜನ್ಯದಿಂದ ಈತನ ಸಲಹೆ ಸ್ವೀಕರಿಸಿ ಮುನ್ನಡೆಯುತ್ತಾರೆ. ಈ ವ್ಯಕ್ತಿಯೇ ಅಂಥೋನಿ ಫೌಸಿ. ಈಗ ಕೋವಿಡ್-19 ಕುರಿತಂತೆ ಯಾವುದೇ ಮಾಹಿತಿ ಬೇಕಿದ್ದರೂ ಅಮೆರಿಕನ್ನರು ಇವರನ್ನೇ ಅವಲಂಬಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ.
ಡಾ. ಅಂಥೋನಿ ಫೌಸಿ ವೃತ್ತಿಯಿಂದ ಓರ್ವ ವೈದ್ಯ ಹಾಗೂ ರೋಗನಿರೋಧಕ ತಜ್ಞರಾಗಿದ್ದು, ಅಮೆರಿಕದ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನ್ಯಾಷನಲ್ ಇನ್ಸ್ಟಿಟ್ಯೂಟ್ನ (NIAID) ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಅಧ್ಯಕ್ಷ ರೋನಾಲ್ಡ್ ರೇಗನ್ರಿಂದ ಹಿಡಿದು ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ವರೆಗೆ ಆರು ಅಧ್ಯಕ್ಷರ ಕೈಕೆಳಗೆ ಕೆಲಸ ಮಾಡಿರುವ ಅನುಭವ ಇವರಿಗಿದೆ. ಕಳೆದ ಮೂವತ್ತು ವರ್ಷಗಳಿಂದ ಅಮೆರಿಕ ನೋಡಿದ ಪ್ರತಿಯೊಂದು ಆರೋಗ್ಯ ವ್ಯವಸ್ಥೆಯ ಸಂಕಷ್ಟ ನಿವಾರಿಸುವಲ್ಲಿ ಫೌಸಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಚ್ಐವಿ, ಸಾರ್ಸ್, ಎಬೋಲಾ, ಮರ್ಸ್ ಮತ್ತು 2001ರ ಜೈವಿಕ ಭಯೋತ್ಪಾದನೆ ದಾಳಿಯ ಸಂದರ್ಭಗಳಲ್ಲಿ ಫೌಸಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ.