ಜಾಗತಿಕ ತಾಪಮಾನ ದಿನೇ ದಿನೇ ಏರುತ್ತಿದೆ. ಪರಿಣಾಮ ಅಂಟಾರ್ಟಿಕಾದಲ್ಲಿ ಪ್ರಸ್ತುತ ದಾಖಲೆ ಮಟ್ಟದಲ್ಲಿ ತಾಪಮಾನ ಏರಿಕೆಯಾಗಿದೆ. ಅಂಟಾರ್ಟಿಕಾದಲ್ಲಿ 2021ರ ಫೆಬ್ರವರಿ 6ರಂದು 18.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈವರೆಗೆ ದಾಖಲಾದ ಅತಿ ಹೆಚ್ಚು ತಾಪಮಾನ.
ಅಂಟಾರ್ಟಿಕಾ ಅತ್ಯಂತ ವೇಗವಾಗಿ ತಾಪಮಾನ ಹೆಚ್ಚಾಗುವ ಪ್ರದೇಶಗಳಲ್ಲಿ ಒಂದಾಗಿದೆ. ಇಲ್ಲಿ ಕಳೆದ 50 ವರ್ಷಗಳಲ್ಲಿ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಯುಎನ್ ಏಜೆನ್ಸಿಯ ಪ್ರಕಾರ, ಅಂಟಾರ್ಟಿಕಾದಲ್ಲಿನ ಹೆಚ್ಚಿನ ಉಷ್ಣತೆಯು ಅಧಿಕ ಒತ್ತಡದ ವ್ಯವಸ್ಥೆಯ ಪರಿಣಾಮವಾಗಿದೆ. ಇಳಿಜಾರು ಮಾರುತಗಳು ಗಮನಾರ್ಹವಾದ ಮೇಲ್ಮೈ ತಾಪಮಾನವನ್ನು ಸೃಷ್ಟಿಸುತ್ತವೆ. ಕಳೆದ 50 ವರ್ಷಗಳಲ್ಲಿ ಸುಮಾರು ಮೂರು ಡಿಗ್ರಿ ಸೆಲ್ಸಿಯಸ್ ಏರಿಕೆ ದಾಖಲಿಸಿದೆ ಎಂದು ಡಬ್ಲ್ಯುಎಂಒ ಪ್ರಧಾನ ಕಾರ್ಯದರ್ಶಿ ಪೆಟ್ಟೇರಿ ತಾಲಾಸ್ ಗುರುವಾರ ಹೇಳಿದ್ದಾರೆ.
ಯುಎನ್ ಏಜೆನ್ಸಿಯ ಪ್ರಕಾರ, ಅಂಟಾರ್ಟಿಕಾದಲ್ಲಿ ಅರ್ಜೆಂಟಿನಾಗೆ ಸಂಬಂಧಿಸಿದ ಎಸ್ಪೆರಂಝಾ ರಿಸರ್ಚ್ ಸ್ಟೇಷನ್ ಬಳಿ ತಾಪಮಾನ ದಾಖಲಾಗಿದೆ ಎಂದು ಮಾಹಿತಿ ನೀಡಿದೆ. ಇದಕ್ಕೂ ಮೊದಲು 2015ರ ಮಾರ್ಚ್ 24ರಂದು 17.5ರಷ್ಟು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಅಂಟಾರ್ಟಿಕಾ ಖಂಡದಲ್ಲಿ ದಾಖಲಾಗಿದ್ದ ಅತಿ ಹೆಚ್ಚು ತಾಪಮಾನವಾಗಿತ್ತು.
ವರ್ಷದಲ್ಲಿ ಆರು ತಿಂಗಳು ಕತ್ತಲು, ಆರು ತಿಂಗಳು ಬೆಳಕು ಇರುವುದರಿಂದ ಈ ಖಂಡ ಜೀವಿಗಳನ್ನು ಪೋಷಿಸಿಲ್ಲ. ಇಲ್ಲಿರುವ ಕೆಲವೇ ಜೀವಿಗಳೂ ಈ ಪ್ರತಿಕೂಲ ವಾತಾವರಣಕ್ಕೆ ಹೊಂದಿಕೊಂಡು ಬಾಳುವೆ ಮಾಡುತ್ತವೆ. ಅವುಗಳಲ್ಲಿ ಪೆಂಗ್ವಿನ್, ಸೀಲ್, ನೀಲಿ ತಿಮಿಂಗಿಲಗಳನ್ನು ಇಲ್ಲಿ ಕಾಣಬಹುದು.
ಇದೀಗ ಈ ಪ್ರದೇಶದಲ್ಲಿ ಏರುತ್ತಿರುವ ತಾಪಮಾನ ಅಲ್ಲಿನ ಪುಟ್ಟ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಅಲ್ಲದೇ ತಾಪಮಾನ ಹೆಚ್ಚಾದರೆ ಮಂಜು ಕರಗಲು ಆರಂಭಿಸುತ್ತದೆ. ಇದರಿಂದ ಸಮುದ್ರದ ನೀರಿನ ಮಟ್ಟ ಹೆಚ್ಚಾಗಿ, ಜಲಪ್ರಳಯ ಸಂಭವಿಸುವ ಸಾಧ್ಯತೆ ಹೆಚ್ಚಾಗಬಹುದು.