ವಾಷಿಂಗ್ಟನ್:ಮಾರಣಾಂತಿಕ ಕೋವಿಡ್ 19 ಸಾಂಕ್ರಾಮಿಕ ಮತ್ತು ಹವಾಮಾನ ಬದಲಾವಣೆಯನ್ನು ಎರಡು ಪ್ರಮುಖ ಜಾಗತಿಕ ಸವಾಲುಗಳೆಂದು ಹೇಳಿರುವ ಜೋ ಬೈಡನ್, 'ಹೊಸ ಅಮೆರಿಕ ಉದಯವಾಗುತ್ತಿದೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜನವರಿ 20 ರಂದು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 100 ದಿನಗಳ ಬಳಿಕ ಬೈಡನ್ ಕಾಂಗ್ರೆಸ್ (ಸಂಸತ್ತು) ಜಂಟಿ ಅಧಿವೇಶನದಲ್ಲಿ ಮೊದಲ ಭಾಷಣ ಮಾಡಿದರು.
ಶತಮಾನದ ಅತ್ಯಂತ ಕೆಟ್ಟ ಸಾಂಕ್ರಾಮಿಕ ಮತ್ತು ದಶಕದ ಅತ್ಯಂತ ಭೀಕರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ ದೇಶವು ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸಿದೆ ಎಂದು ಹೇಳಿದರು.
'ಮತ್ತೆ ವಿಶ್ವವನ್ನು ಮುನ್ನಡೆಸುತ್ತಿದ್ದೇವೆ'
'ಹೊಸ ಅಮೆರಿಕ ಉದಯವಾಗುತ್ತಿದೆ. ಭಯದ ವಿರುದ್ಧ ಭರವಸೆ, ಸುಳ್ಳಿನ ವಿರುದ್ಧ ಸತ್ಯ, ಮತ್ತು ಕತ್ತಲೆಯ ವಿರುದ್ಧ ಬೆಳಕನ್ನು ದೇಶ ಆಯ್ಕೆ ಮಾಡಿಕೊಂಡಿದೆ. 100 ದಿನಗಳ ರಕ್ಷಣಾ ಹಾಗೂ ಪುನಶ್ವೇತನ ಕಾರ್ಯಗಳು ಅಮೆರಿಕವನ್ನು ಸಂಕಷ್ಟದಿಂದ ಪಾರು ಮಾಡಿದೆ. ನಾವು ಮತ್ತೆ ಕೆಲಸ ಮಾಡುತ್ತಿದ್ದೇವೆ, ಮತ್ತೆ ಕನಸು ಕಾಣುತ್ತಿದ್ದೇವೆ. ಮತ್ತೆ ವಿಶ್ವವನ್ನು ಮುನ್ನಡೆಸುತ್ತಿದ್ದೇವೆ. ಜಗತ್ತಿನಲ್ಲಿ ಅಮೆರಿಕದ ಹಿಂಜರಿಕೆಯ ಮಾತೇ ಇಲ್ಲ' ಎಂದು ಬೈಡನ್ ತಮ್ಮ ಭಾಷಣದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದನೆಯಿಂದ ಪರಮಾಣು ಪ್ರಸರಣ, ಸಾಮೂಹಿಕ ವಲಸೆ, ಸೈಬರ್ ಭದ್ರತೆ, ಹವಾಮಾನ ಬದಲಾವಣೆ ಹಾಗೂ ಈಗಿನ ಸಾಂಕ್ರಾಮಿಕ ರೋಗಗಳಂತೆ ಯಾವುದೇ ಒಂದು ರಾಷ್ಟ್ರವು ನಮ್ಮಂತೆ ಎಲ್ಲಾ ಬಿಕ್ಕಟ್ಟುಗಳನ್ನು ಎದುರಿಸಲು ಸಾಧ್ಯವಿಲ್ಲ. ನಾವು ಮೊದಲಿನ ಸಹಜ ಸ್ಥಿತಿಗೆ ಹಿಂತಿರುಗುತ್ತಿದ್ದೇವೆ. ಆದರೆ ಏಕಾಂಗಿಯಾಗಿಯಲ್ಲ, ನಮ್ಮ ಮಿತ್ರರಾಷ್ಟ್ರಗಳ ಬದಲಾವಣೆಗೂ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅಮೆರಿಕಾಧ್ಯಕ್ಷರು ತಿಳಿಸಿದರು.