ಬ್ರಜಿಲಿಯಾ(ಬ್ರೆಜಿಲ್):ಅಮೆಜಾನ್ ಕಾಡಿನಲ್ಲಿ ಕಳೆದೊಂದು ವಾರದಿಂದ ಕಾಳ್ಗಿಚ್ಚು ಭಾರಿ ಆತಂಕ ಸೃಷ್ಟಿಸಿದ್ದು, ವಿನಾಶದ ಮುನ್ಸೂಚನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲ ವಾರಗಳ ಹಿಂದೆ ಶುರುವಾಗಿ ವಿಸ್ತರಿಸಿರುವಕಾಳ್ಗಿಚ್ಚುಅಮೆಜಾನ್ ಮಳೆಕಾಡನ್ನು ಪೂರ್ತಿಯಾಗಿ ಆವರಿಸುವ ಸೂಚನೆ ನೀಡಿದೆ. ಆಕಾಶದೆತ್ತರಿಂದ ನೋಡಿದಾಗ ದಟ್ಟ ಹೊಗೆ ಕಾಣಿಸುತ್ತಿದ್ದು, ಇದು ಬೆಂಕಿಯ ತೀವ್ರತೆಯನ್ನು ಸಾರಿ ಹೇಳುತ್ತಿದೆ.
ಅಮೆಜಾನಾಸ್, ರೊಡೋನಿಯಾ, ಪಾರಾ ಮತ್ತು ಮ್ಯಾಟೊ ಗ್ರೋಸೋ ಹೆಸರಿನ ಬ್ರೆಜಿಲ್ ರಾಜ್ಯಗಳಲ್ಲಿ ಹರಡಿರುವ ಬೆಂಕಿಯ ಉಪಗ್ರಹ ಆಧಾರಿತ ಚಿತ್ರಗಳನ್ನು ನಾಸಾ ಪ್ರಕಟಿಸಿದೆ. ವಿಶ್ವದ ಅತೀ ದೊಡ್ಡ ಮಳೆಕಾಡು ಅಮೆಜಾನ್, ಜಾಗತಿಕ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಸುಮಾರು 3 ಕೋಟಿಗೂ ಅಧಿಕ ಸಸ್ಯ-ಪ್ರಾಣಿ ಪ್ರಬೇಧಗಳನ್ನು ಹೊಂದಿರುವ ಅಮೆಜಾನ್ ಕಾಡು, ಒಂದು ಮಿಲಿಯನ್ ಬುಡಕಟ್ಟು ಜನರಿಗೆ ಆಶ್ರಯ ನೀಡಿದೆ. ವಿಶ್ವದ ಶೇ.20ರಷ್ಟು ಆಮ್ಲಜನಕವನ್ನು ಈ ಅಮೆಜಾನ್ ಕಾಡು ಹೊರಸೂಸುತ್ತದೆ. ಈ ಎಲ್ಲ ಕಾರಣಗಳಿಂದ ಅಮೆಜಾನ್ ಕಾಡಿನ ಸದ್ಯದ ಭಾರಿಕಾಳ್ಗಿಚ್ಚು ಮನುಷ್ಯ ಸಂಕುಲದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದೆ.
ಅಮೆಜಾನ್ ಕಾಡಿನಲ್ಲಿ ನಡೆದಕಾಳ್ಗಿಚ್ಚುಪ್ರಕರಣಗಳು:
ಈ ವರ್ಷದ ಜನವರಿಯಿಂದ ಅಮೆಜಾನ್ ಕಾಡಿನಲ್ಲಿ ಸುಮಾರು 74,155 ಕಾಡ್ಗಿಚ್ಚು ಪ್ರಕರಣಗಳು ದಾಖಲಾಗಿವೆ. 2018ಕ್ಕೆ ಹೋಲಿಕೆ ಮಾಡಿದಲ್ಲಿ ಇದು ಶೇ.85ರಷ್ಟು ಏರಿಕೆ ಎಂದು ನ್ಯಾಷನಲ್ ಇನ್ಸ್‌ಟ್ಯೂಟ್ ಫಾರ್ ಸ್ಪೇಸ್ ರಿಸರ್ಚ್ ವರದಿಯಲ್ಲಿ ಹೇಳಿದೆ. 2016ರಲ್ಲಿ 67,790 ಕಾಡ್ಗಿಚ್ಚು ಪ್ರಕರಣಗಳು ಕಂಡುಬಂದಿದ್ದವು.
ಅಮೇಜಾನ್ಕಾಳ್ಗಿಚ್ಚಿಗೆ ಯಾಕಿಷ್ಟು ಪ್ರಾಮುಖ್ಯತೆ?
ಅಮೆಜಾನ್ ಕಾಡು ಸುಮಾರು 7.4 ಮಿಲಿಯನ್ ಸ್ಕ್ವೇರ್ ಕಿ.ಮೀನಲ್ಲಿ ವ್ಯಾಪಿಸಿದೆ. ಇದು ಸುಮಾರು ಶೇ.40ರಷ್ಟು ಲ್ಯಾಟಿನ್ ಅಮೆರಿಕಾ ಖಂಡವನ್ನೇ ಸುತ್ತುವರೆದಿದೆ. ಲ್ಯಾಟಿನ್ ಅಮೆರಿಕಾ ದೇಶಗಳಾದ ಬೊಲಿವಿಯಾ, ಬ್ರೆಜಿಲ್, ಕೊಲಂಬಿಯಾ, ಈಕ್ವೇಡಾರ್, ಫ್ರೆಂಚ್ ಗಯಾನ, ಗಯಾನ, ಪೆರು, ಸುರಿನೇಮ್ ಹಾಗೂ ವೆನುಜುವೆಲಾ ದೇಶಗಳಲ್ಲಿ ಹರಡಿಕೊಂಡಿದೆ.