ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ಬಾಹ್ಯಾಕಾಶ ಪ್ರವಾಸ ಕೈಗೊಂಡು ಮರಳಿದ ಒಂಬತ್ತು ದಿನಗಳ ನಂತರ ಇಂದು ಸಂಜೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದರು.
ಜೆಫ್ ಬೆಜೋಸ್ ಇಂದು ಅಮೆರಿಕದ ಪಶ್ಚಿಮ ಟೆಕ್ಸಾಸ್‌ನಲ್ಲಿ ನಾಲ್ವರು ಗಗನಯಾತ್ರಿಗಳ ಜೊತೆ ನ್ಯೂ ಶೆಪರ್ಡ್ ರಾಕೆಟ್‌ನಲ್ಲಿ ಬಾಹ್ಯಾಕಾಶ ಯಾನ ಮಾಡಿ ಮರಳಿದ್ದಾರೆ. ಒಟ್ಟು ನಾಲ್ವರು ಪ್ರಯಾಣಿಕರು ಅಂತರಿಕ್ಷದಲ್ಲಿ 11 ನಿಮಿಷಗಳ ಕಾಲ ರೋಚಕ ಅನುಭವ ಪಡೆದರು. ವರ್ಜಿನ್ ಗ್ಯಾಲಕ್ಸಿಯ ರಿಚರ್ಡ್ ಬ್ರಾನ್ಸನ್ ನಂತರ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಸ್ವಂತ ರಾಕೆಟ್‌ನಲ್ಲಿ ಬಾಹ್ಯಾಕಾಶಕ್ಕೆ ಹಾರಲಿರುವ 2ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜೆಫ್ ಬೆಜೋಸ್ ಮತ್ತು ಮೂವರು ಸಹ ಪ್ರಯಾಣಿಕರು ಪಶ್ಚಿಮ ಟೆಕ್ಸಾಸ್‌ನಿಂದ ಬಾಹ್ಯಾಕಾಶಕ್ಕೆ ಪ್ರಯಾಣಿಸಿ, ವಾಪಸಾಗಿದ್ದಾರೆ. ಜೆಫ್ ಅವರ ಈ ಕನಸಿನ ಯಾನದಲ್ಲಿ ಅವರ ಜತೆ ಸಹೋದರ ಮಾರ್ಕ್ ಪ್ರಯಾಣಿಸಿದ್ದು, 18 ವರ್ಷದ ಆಲಿವರ್ ಡೀಮೆನ್ ಅತ್ಯಂತ ಕಿರಿಯ ಬಾಹ್ಯಾಕಾಶ ಪ್ರವಾಸಿಗರಾಗಿದ್ದರು. 82 ವರ್ಷದ ವಾಲಿ ಫಂಕ್ ಬಾಹ್ಯಾಕಾಶಕ್ಕೆ ಹೋದ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ.