ನವದೆಹಲಿ:2020ರ ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಒಂದು ದಿನ ಮುಂಚಿತವಾಗಿ ಭೂಮಿಯ ಮೇಲೆ ಸಣ್ಣ ಕ್ಷುದ್ರಗ್ರಹವು ಸಾಗಲಿದೆ. ಇದು ಭೂಮಿಗೆ ಅಪ್ಪಳಿಸುವ ಶೇಕಡಾ 0.41ರಷ್ಟು ಅವಕಾಶವನ್ನು ಹೊಂದಿದೆ ಎಂದು ನಾಸಾ ದತ್ತಾಂಶವು ಊಹಿಸಿದೆ.
2020ರ ಯುಎಸ್ ಚುನಾವಣೆಗೆ ಒಂದು ದಿನ ಮೊದಲು 0.002 ಕಿ.ಮೀ (ಸುಮಾರು 6.5 ಅಡಿ) ವ್ಯಾಸವನ್ನು ಹೊಂದಿರುವ "2018 ವಿಪಿ 1" ಎಂಬ ಕ್ಷುದ್ರಗ್ರಹವು ಭೂಮಿಯ ಬಳಿ ಹಾದುಹೋಗುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ. ಈ ಮೊದಲು 2018ರಲ್ಲಿ ಕ್ಯಾಲಿಫೋರ್ನಿಯಾದ ಪಾಲೋಮರ್ ವೀಕ್ಷಣಾಲಯದಲ್ಲಿ ಈ ಕ್ಷುದ್ರ ಗ್ರಹದ ಚಲನ-ವಲನವನ್ನ ಗುರುತಿಸಲಾಗಿತ್ತು.
12.968 ದಿನಗಳ 21 ಅವಲೋಕನಗಳ ಆಧಾರದ ಮೇಲೆ, ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾವು ಕ್ಷುದ್ರಗ್ರಹವು ಆಳವಾದ ಪರಿಣಾಮವನ್ನು ಬೀರುವುದಿಲ್ಲ ಎಂದು ಹೇಳಿದೆ. ಕಳೆದ ವಾರಾಂತ್ಯದಲ್ಲಿ ಒಂದು ಸಣ್ಣ ಕಾರು ಗಾತ್ರದ ಕ್ಷುದ್ರಗ್ರಹವು ಭೂಮಿಯಿಂದ ಕೊಂಚ ದೂರದಲ್ಲಿ ಹಾರಿಹೋಗಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.