ಲಾಸ್ ಏಂಜಲಿಸ್ : ಫೆಬ್ರವರಿ 28, 2021 ರಂದು ನಡೆಯಬೇಕಿದ್ದ 93ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏಪ್ರಿಲ್ 25 ಕ್ಕೆ ಮುಂದೂಡಲಾಗಿದೆ ಎಂದು ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ತಿಳಿಸಿದೆ. ಇದರಿಂದಾಗಿ 40 ವರ್ಷಗಳಲ್ಲಿ ಇದೇ ಮೊದಲ ಬಾರಿ ಕಾರ್ಯಕ್ರಮ ಮುಂದೂಡಿದಂತಾಗಿದೆ.
93 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆ - Oscars postponed to April
ಕೊರೊನಾ ವೈರಸ್ ಹಿನ್ನೆಲೆ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು 2021 ಏಪ್ರಿಲ್ 25ಕ್ಕೆ ಮುಂದೂಡಲಾಗಿದೆ.
ಈ ಬಗ್ಗೆ ಮಾತನಾಡಿರುವ ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್, ಒಂದು ಶತಮಾನದಿಂದಲೂ ಚಲನಚಿತ್ರಗಳು ಕರಾಳ ಕಾಲದಲ್ಲಿ ನಮಗೆ ಸಾಂತ್ವನ, ಸ್ಫೂರ್ತಿ ಮತ್ತು ಮನರಂಜನೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಬಾರಿಯೂ ಚಲನಚಿತ್ರಗಳು ಆ ಕಾರ್ಯವನ್ನು ಮಾಡಿವೆ. ಮುಂಬರುವ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಮ್ಮ ಹೊಸ ವಸ್ತು ಸಂಗ್ರಹಾಲಯ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಸಿಎನ್ಎನ್ ವರದಿ ಪ್ರಕಾರ, 1981 ರಲ್ಲಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ ಹತ್ಯೆ ಯತ್ನದಿಂದಾಗಿ 24 ಗಂಟೆಗಳ ಕಾಲ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುಂದೂಡಲಾಗಿತ್ತು. ಆ ಬಳಿಕ ಕಾರ್ಯಕ್ರಮ ಮುಂದೂಡಿಕೆ ಆಗುತ್ತಿರುವುದು ಇದೇ ಮೊದಲ ಬಾರಿಗೆ ಎನ್ನಲಾಗುತ್ತಿದೆ.