ವಾಷಿಂಗ್ಟನ್ : ಮಿನ್ನಿಯಾ ಪೊಲೀಸ್ ನಗರದಲ್ಲಿ ಕಪ್ಪು ವರ್ಣೀಯನ ಸಾವಿನ ನಂತರ ಭುಗಿಲೆದ್ದ ಪ್ರತಿಭಟನೆ ರಾಜಧಾನಿ ವಾಷಿಂಗ್ಟನ್ ಸೇರಿದಂತೆ ಹಲವು ಕಡೆ ಹಬ್ಬಿದ್ದು, ಅಮೆರಿಕದ 40 ನಗರಗಳಲ್ಲಿ ಕರ್ಫ್ಯೂ ಹೇರಲಾಗಿದೆ.
ಪ್ರತಿಭಟನೆ ಹತ್ತಿಕ್ಕಲು ಸುಮಾರು 5 ಸಾವಿರ ರಾಷ್ಟ್ರೀಯ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ವಾಷಿಂಗ್ಟನ್ನಲ್ಲಿ ಸುಮಾರು 2 ಸಾವಿರ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಅನಿವಾರ್ಯತೆಯಿದ್ದರೆ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ ಎಂದು ನ್ಯಾಷನಲ್ ಗಾರ್ಡ್ ಬ್ಯೂರೋದ ಮುಖ್ಯಸ್ಥ ಜನರಲ್ ಲೆನ್ಗೈಲ್ ಹೇಳಿದ್ದಾರೆ.
ಅಮೆರಿಕ ಪೊಲೀಸರ ಮೇಲೆ ಜನಾಂಗೀಯ ತಾರತಮ್ಯ ಆರೋಪ ಕೇಳಿಬರುತ್ತಿದ್ದು, ಇದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್ ಓಬ್ರಿಯನ್ ತಳ್ಳಿಹಾಕಿದ್ದಾರೆ.
ಮಿನ್ನಿಯಾ ಪೊಲೀಸ್ ನಗರದಲ್ಲಿ ಕಳ್ಳತನ ಆರೋಪದ ಮೇಲೆ ಜಾರ್ಜ್ ಫ್ಲೋಯ್ಡ್ ಎಂಬ 46 ವರ್ಷದ ಆಫ್ರಿಕನ್- ಅಮೆರಿಕನ್ ವ್ಯಕ್ತಿಯನ್ನು ಪೊಲೀಸರು ಬಂಧಿಸುವ ವೇಳೆ ಆತನನ್ನು ಹಿಂಸಿಸಲಾಗಿತ್ತು. ಆ ನಂತರ ಆತ ಸಾವಿಗೀಡಾಗಿದ್ದ.