ಮೆಕ್ಸಿಕೋ ಸಿಟಿ(ಮೆಕ್ಸಿಕೋ):ಮಾದಕ ವಸ್ತುಗಳ ಮಾಫಿಯಾದ ಮೆಕ್ಸಿಕೋದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದೆ. ಕಳೆದ ವಾರ 10 ಶವಗಳು ಪತ್ತೆಯಾದ ಮೆಕ್ಸಿಕನ್ ರಾಜ್ಯವಾದ ಜಕಾಟೆಕಾಸ್ನ ಹೆದ್ದಾರಿಯಲ್ಲಿರುವ ಮೇಲ್ಸೇತುವೆಯಿಂದ ಈಗ ಮೂರು ಶವಗಳು ನೇತಾಡುತ್ತಿವೆ.
ಹೌದು, ಜಕಾಟೆಕಾಸ್ ರಾಜ್ಯದ ಸ್ಯಾನ್ ಜೋಸ್ ಡಿ ಲೌರ್ಡೆಸ್ ನಗರದಲ್ಲಿರುವ ಸೇತುವೆಗೆ ಮೂರು ಶವಗಳನ್ನು ನೇತುಹಾಕಲಾಗಿದೆ ಎಂದು ಜಕಾಟೆಕಾಸ್ ರಾಜ್ಯದ ಸಾರ್ವಜನಿಕ ಸುರಕ್ಷತಾ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು, ಇದೇ ಜಕಾಟೆಕಾಸ್ ರಾಜ್ಯದ ಹಾಗೂ ಮೆಕ್ಸಿಕೋ ನಗರದಿಂದ ಉತ್ತರಕ್ಕೆ ಸುಮಾರು 550 ಕಿಲೋಮೀಟರ್ ದೂರದಲ್ಲಿರುವ ಸಿಯುಡಾಡ್ ಕ್ವಾಹ್ಟೆಮೊಕ್ ಪಟ್ಟಣದಲ್ಲಿ 10 ಮಂದಿಯನ್ನು ಕೊಲ್ಲಲಾಗಿದ್ದು, 9 ಮಂದಿಯನ್ನು ಸೇತುವೆಯೊಂದಕ್ಕೆ ನೇತುಹಾಕಲಾಗಿತ್ತು. ಪಾದಚಾರಿ ಮಾರ್ಗದಲ್ಲಿ ಒಂದು ಶವ ಬಿದ್ದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳೆಲ್ಲವೂ ಪುರುಷರದ್ದು ಎಂಬುದು ಮತ್ತೊಂದು ಅಂಶ ಬೆಳಕಿಗೆ ಬಂದಿದೆ.
ಮೆಕ್ಸಿಕೋದಲ್ಲಿ ಡ್ರಗ್ಸ್ ವಾರ್
ಜಕಾಟೆಕಾಸ್ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾದ ಪಾರುಪತ್ಯಕ್ಕಾಗಿ ಈ ಸಂಘರ್ಷಗಳು ನಡೆಯುತ್ತಿವೆ ಎನ್ನಲಾಗಿದೆ. ಇಲ್ಲಿನ ಹಲವಾರು ಡ್ರಗ್ಸ್ ಮಾಫಿಯಾ ಗ್ಯಾಂಗ್ಗಳಿದ್ದು, ಅವುಗಳನ್ನು ಡ್ರಗ್ಸ್ ಕಾರ್ಟೆಲ್ಗಳು ಎಂದು ಕರೆಯಲಾಗುತ್ತದೆ. ಸಿನಾಲೊಯಾ(Sinaloa) ಮತ್ತು ಜಾಲಿಸ್ಕೋ (Jalisco) ಎಂಬ ಎರಡು ಕಾರ್ಟೆಲ್ಗಳು ಬಲಿಷ್ಟವಾಗಿದ್ದು, ಇವುಗಳ ನಡುವಿನ ಘರ್ಷಣೆಯ ಕಾರಣದಿಂದ ಈ ರೀತಿಯಲ್ಲಿ ಹೆಣಗಳು ಉರುಳುತ್ತವೆ.
ಹೆಣಗಳನ್ನು ನೇತು ಹಾಕುವುದು ಏಕೆ?
ಡ್ರಗ್ಸ್ ಮಾಫಿಯಾದಲ್ಲಿ ಹತ್ಯೆ ಮಾಡಲ್ಪಟ್ಟವರನ್ನು ಸೇತುವೆಗಳ ಬಳಿ ನೇತುಹಾಕುವುದು ಅಥವಾ ಸಾರ್ವಜನಿಕವಾಗಿ ಎಲ್ಲರಿಗೂ ಗೊತ್ತಾಗುವಂತೆ ಪ್ರದರ್ಶಿಸುವುದನ್ನು ಈ ಕಾರ್ಟೆಲ್ಗಳು ಮಾಡುತ್ತವೆ. ಈ ಮೂಲಕ ಪ್ರತಿಸ್ಪರ್ಧಿಗಳು ಮತ್ತು ಜನರು ಹಾಗೂ ಅಧಿಕಾರಿಗಳಲ್ಲಿ ಭಯವನ್ನು ಉಂಟುಮಾಡುವುದು ಅವರ ಉದ್ದೇಶವಾಗಿರುತ್ತದೆ. ಈ ವರ್ಷದಲ್ಲಿ ಈವರೆಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಮಂದಿಯನ್ನು ಇದೇ ರೀತಿ ಕೊಲೆ ಮಾಡಲಾಗಿದೆ ಎಂದು ಅಲ್ಲಿನ ಸರ್ಕಾರ ನೀಡುವ ಅಂಕಿ ಅಂಶವಾಗಿದೆ.
ಇದನ್ನೂ ಓದಿ:ನಿಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಪಾಸ್‌ವರ್ಡ್ ಹ್ಯಾಕ್ ಆಗಿವೆಯಾ? : ಇಲ್ಲಿದೆ ಸಂಪೂರ್ಣ ಮಾಹಿತಿ