ಪೋರ್ಟ್-ಔ-ಪ್ರಿನ್ಸ್ ,ಹೈಟಿ:ಶನಿವಾರ ಬೆಳಿಗ್ಗೆ ಹೈಟಿಯಲ್ಲಿ ಅತ್ಯಂತ ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ 227 ಜನರು ಸಾವನ್ನಪ್ಪಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಸಾಕಷ್ಟು ಮಂದಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಯುಎಸ್ ಜಿಯಾಲಾಜಿಕಲ್ ಸರ್ವೇ ಪ್ರಕಾರ ಹೈಟಿಯ ನಗರವಾದ ಸೇಂಟ್-ಲೂಯಿಸ್-ಡು-ಸುದ್ನಿಂದ ಈಶಾನ್ಯಕ್ಕೆ ಸುಮಾರು 12 ಕಿಲೋಮೀಟರ್ ಮತ್ತು 10 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂಬ ಮಾಹಿತಿ ದೊರಕಿದೆ.
ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು, ಮನೆಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಅಮೆರಿಕನ್ ರೆಡ್ ಕ್ರಾಸ್ ವಕ್ತಾರ ಕೇಟೀ ವಿಲ್ಕ್ಸ್ ಹೇಳಿದ್ದಾರೆ.