ಎಲ್ ಅಗಾಜೆ (ಮೆಕ್ಸಿಕೊ) : ಪಶ್ಚಿಮ ಮೆಕ್ಸಿಕೊದಲ್ಲಿ 14 ಪೊಲೀಸರನ್ನು ಶಂಕಿತ ಕಾರ್ಟೆಲ್ ಬಂದೂಕುಧಾರಿಗಳು ಹತ್ಯೆಗೈದಿದ್ದಾರೆ. ಪಶ್ಚಿಮ ಪ್ರದೇಶದ ಮೈಕೋವಕಾನ್ ರಾಜ್ಯದಲ್ಲಿ ಬಂದೂಕುಧಾರಿಗಳು ಹೊಂಚು ಹಾಕಿ ದಾಳಿ ನಡೆಸಿದ್ದು, 14 ಮೆಕ್ಸಿಕನ್ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದು ಮತ್ತು ಇತರ ಮೂವರು ಗಾಯಗೊಂಡಿದ್ದಾರೆ.
ಬಂದೂಕುಧಾರಿಗಳಿಂದ 14 ಪೊಲೀಸರ ಹತ್ಯೆ ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಅಗುಯಿಲ್ಲಾ ಪುರಸಭೆಯ ಎಲ್ ಅಗಾಜೆ ಪಟ್ಟಣದ ಮನೆಯೊಂದಕ್ಕೆ ತೆರಳಿದ ವೇಳೆ ಬಂದೂಕುಧಾರಿಗಳು ಪೊಲೀಸರ ಮೇಲೆ ಗುಂಡಿನ ಮಳೆಗರೆದಿದ್ದಾರೆ ಎಂದು ಮೈಕೋವಕಾನ್ ರಾಜ್ಯ ಭದ್ರತಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಹೆದ್ದಾರಿಯ ಮಧ್ಯದಲ್ಲಿ ವಾಹನಗಳು ಉರಿಯುತ್ತಿರುವ ಚಿತ್ರಗಳು ಮೆಕ್ಸಿಕನ್ ಮಾಧ್ಯಮದಲ್ಲಿ ಪ್ರಕಟಗೊಂಡಿವೆ. ಮೆಕ್ಸಿಕೊದ ಅತ್ಯಂತ ಶಕ್ತಿಶಾಲಿ ಕಾರ್ಟೆಲ್‌ಗಳಲ್ಲಿ ಒಂದಾದ ಜಾಲಿಸ್ಕೊ ನ್ಯೂ ಜನರೇಷನ್ ಸಹಿ ಮಾಡಿದ ಸಂದೇಶಗಳಿವೆ.
ಮೆಕ್ಸಿಕನ್ ಅಧಿಕಾರಿಗಳು ಈ ಹೊಂಚುದಾಳಿಯನ್ನು ಖಂಡಿಸಿದ್ದು, ಪೊಲೀಸರ ಮೇಲೆ ನಡೆದ ದಾಳಿಗೆ ಶಿಕ್ಷೆ ವಿಧಿಸಲಾಗುವುದು. ಇದೊಂದು ಹೇಡಿತನದ ಕೃತ್ಯ. ರಸ್ತೆಯ ಮಧ್ಯೆ ತೆರಳುತ್ತಿದ್ದ ವೇಳೆ ಹೊಂಚುಹಾಕಿ ದಾಳಿ ಮಾಡಿದ್ದಾರೆ. ಇದು ಮೋಸದ ದಾಳಿ ಎಂದು ಮೈಕೋವಕಾನ್ ಗವರ್ನರ್ ಸಿಲ್ವಾನೋ ರಿಯೊಲ್ಸ್ ಹೇಳಿದ್ದಾರೆ.
2006 ಮತ್ತು 2012 ರ ನಡುವಿನ ಮೆಕ್ಸಿಕೊದ ಡ್ರಗ್ ವಾರ್ನ ದಿನಗಳನ್ನು ಈ ದಾಳಿ ಮೆಲುಕು ಹಾಕುವಂತೆ ಮಾಡಿದೆ. ಆಗಸ್ಟ್ನಲ್ಲಿ, ಉರುಪಾನ್ ಪಟ್ಟಣದಲ್ಲಿ ಪೊಲೀಸರು 19 ಶವಗಳನ್ನು ಪತ್ತೆ ಮಾಡಿದ್ದರು, ಇದರಲ್ಲಿ ಒಂಬತ್ತು ಶವಗಳನ್ನು ಸೇತುವೆಗೆ ನೇತುಹಾಕಲಾಗಿತ್ತು.