ಕಳೆದ ಕೆಲವು ವರ್ಷಗಳಿಂದ ಇಸ್ಲಾಮಿಕ್ ಉಗ್ರಗಾಮಿಗಳು ನೈಜೀರಿಯಾ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದು, ಅಮಾಯಕರನ್ನು ಅಪಹರಿಸಿ ಕೊಲ್ಲುವುದು ಸೇರಿದಂತೆ ಹಿಂಸಾಚಾರ ನಡೆಸುತ್ತಿದ್ದಾರೆ. ಮೂರು ದಿನಗಳ ಹಿಂದೆ ಹೊಲದಲ್ಲಿ ತಮ್ಮ ಬೆಳೆಗಳನ್ನು ಕಟಾವು ಮಾಡುತ್ತಿದ್ದ ರೈತರು ಮತ್ತು ಮೀನುಗಾರರು ಸೇರಿ 110 ಮಂದಿ ಉಗ್ರರ ದಾಳಿಗೆ ಬಲಿಯಾಗಿದ್ದರು. ಇಸ್ಲಾಮಿಕ್ ಉಗ್ರ ಸಂಘಟನೆಯಾದ 'ಬೊಕೊ ಹರಾಮ್' ಈ ಕೃತ್ಯ ಎಸಗಿದೆ ಎಂದು ಶಂಕಿಸಲಾಗಿದೆ.
ನೈಜೀರಿಯಾದ ಮೈದುಗುರ್ ನಗರದ ಕೊಶೋಬೆ ಗ್ರಾಮದಲ್ಲಿ ಬೊಕೊ ಹರಾಮ್ ಸದಸ್ಯರು ಸುಲಿಗೆಗೆ ಮುಂದಾಗಿದ್ದು, ಇದಕ್ಕೆ ಜನರು ನಿರಾಕರಿಸಿದ್ದರಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸಾವಿಗೆ ನೈಜೀರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ ಸಂತಾಪ ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ
ಗನ್ ಹಿಡಿದು ಬಂದಿದ್ದ ಬೊಕೊ ಹರಾಮ್ನ ಸದಸ್ಯನೋರ್ವ ಹಣ ನೀಡುವಂತೆ ಹಾಗೂ ತನಗೆ ಅಡುಗೆ ಮಾಡಿ ಹಾಕುವಂತೆ ರೈತರಿಗೆ ಆದೇಶಿಸಿ ಊಟ ಮಾಡಲು ಕಾಯುತ್ತಾ ಕುಳಿತಿದ್ದಾನೆ. ಈ ವೇಳೆ ರೈತರೆಲ್ಲರೂ ಒಟ್ಟಾಗಿ ಉಗ್ರನಿಂದ ಗನ್ ಕಸಿದುಕೊಂಡು ಆತನನ್ನು ಕಟ್ಟಿ ಹಾಕಿದ್ದಾರೆ. ಬಳಿಕ ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಿದ್ದಾರೆ. ಆದರೆ ಭದ್ರತಾ ಪಡೆಗಳು ಧೈರ್ಯಶಾಲಿ ರೈತರನ್ನು ರಕ್ಷಿಸಲಿಲ್ಲ. ಇದಕ್ಕೆ ಪ್ರತಿಕಾರವಾಗಿ ಉಗ್ರರು ದಾಳಿ ನಡೆಸಿ ನೆತ್ತರು ಹರಿಸಿದ್ದಾರೆ.
7 ತಿಂಗಳಲ್ಲಿ 1,400 ಕ್ರೈಸ್ತರ ಬಲಿ
ಆಗಸ್ಟ್ನಲ್ಲಿ ಇಲ್ಲಿನ ದಕ್ಷಿಣ ಕಡುನಾ ರಾಜ್ಯದಲ್ಲಿ ಬೊಕೊ ಹರಾಮ್ ನಡೆಸಿದ ದಾಳಿಯಲ್ಲಿ ಕ್ರಿಶ್ಚಿಯನ್ ಸಮುದಾಯದ 33 ಜನರು ಸಾವನ್ನಪ್ಪಿದ್ದರು. ಜುಲೈನಲ್ಲಿ ನಡೆದ ಎರಡು ಪ್ರತ್ಯೇಕ ದಾಳಿಯಲ್ಲಿ 50 ಮಂದಿ ಅಸುನೀಗಿದ್ದರು. ಜನವರಿಯಿಂದ ಜುಲೈನಲ್ಲಿ ಒಟ್ಟು 1,400 ಕ್ಕೂ ಹೆಚ್ಚು ಕ್ರೈಸ್ತರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಓಪನ್ ಡೋರ್ಸ್ ಬಿಡುಗಡೆ ಮಾಡಿರುವ 2020ರ 'ವರ್ಲ್ಡ್ ವಾಚ್ ಲಿಸ್ಟ್' ಪಟ್ಟಿಯಲ್ಲಿ ನೈಜೀರಿಯಾ 12 ನೇ ಸ್ಥಾನದಲ್ಲಿದೆ. ಕ್ರಿಶ್ಚಿಯನ್ನರು ಹೆಚ್ಚು ಕಿರುಕುಳ ಅನುಭವಿಸುವ ದೇಶಗಳ ಪಟ್ಟಿ ಇದಾಗಿದೆ. ಆದರೆ ಅತಿಹೆಚ್ಚು ಕ್ರೈಸ್ತರನ್ನು ಹತ್ಯೆಗೈದಿರುವ ಪೈಕಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದ್ದರೆ ನೈಜೀರಿಯಾ ಎರಡನೇ ಸ್ಥಾನದಲ್ಲಿದೆ.
ಜನಾಂಗೀಯ ಹತ್ಯಾಕಾಂಡ
ಅತಿಹೆಚ್ಚು ಸಾಮೂಹಿಕ ಹತ್ಯೆ ಮಾಡಿರುವ ಅಥವಾ ಜನಾಂಗೀಯ ಹತ್ಯಾಕಾಂಡ ನಡೆಸಿರುವ 'ವಿಶ್ವದ ಮಾರಣಾಂತಿಕ ಗುಂಪು' ಎಂಬ ಕುಖ್ಯಾತಿ ಬೊಕೊ ಹರಾಮ್ಗಿದೆ. 2012ರಿಂದ ಈವರೆಗೆ ಸುಮಾರು 27,000 ಜನರ ಉಸಿರು ನಿಲ್ಲಿಸಿದೆ ಈ ಬೊಕೊ ಹರಾಮ್ ಸಂಘಟನೆ. ಇಲ್ಲಿ ಜನಾಂಗ, ಸಮುದಾಯ, ಧಾರ್ಮಿಕ ಗುಂಪು ಆಧಾರದ ಮೇಲೆ ಜನರನ್ನು ಹತ್ಯೆಗೈಯ್ಯಲಾಗುತ್ತದೆ.
ಫುಲಾನಿ ಜಿಹಾದಿಗಳು
19ನೇ ಶತಮಾನದಲ್ಲಿ, ಫುಲಾನಿ ಜಿಹಾದಿಗಳು ಉತ್ತರ ನೈಜೀರಿಯಾದಲ್ಲಿ ಇಸ್ಲಾಂ ಧರ್ಮವನ್ನು ಪಸರಿಸಿದರು. ಅನೇಕರನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಿದರು. ಇದೀಗ ನೈಜೀರಿಯಾದಲ್ಲಿ 15 ಮಿಲಿಯನ್ ಫುಲಾನಿ ಜಿಹಾದಿಗಳಿದ್ದಾರೆ. 2016 ರಿಂದ ಈ ಫುಲಾನಿ ಜಿಹಾದಿಗಳು ದೇಶದಲ್ಲಿನ 2000 ಕ್ಕೂ ಹೆಚ್ಚು ಕ್ರೈಸ್ತರನ್ನು ಕೊಂದಿದ್ದಾರೆ. ಕ್ರಿಶ್ಚಿಯನ್ನರು ಬಹುಪಾಲು ಇರುವ ಹಳ್ಳಿ-ಹಳ್ಳಿಗಳನ್ನು ಗುರಿಯಾಗಿಸುವ ಈ ಗುಂಪು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಎಲ್ಲಾ ಕ್ರಿಶ್ಚಿಯನ್ನರನ್ನು ಕೊಂದು ಹಾಕುತ್ತಾರೆ.
ನೈಜೀರಿಯನ್ ಸರ್ಕಾರ 'ಫುಲಾನಿ ಹತ್ಯಾಕಾಂಡ'ಗಳನ್ನು ಬೆಂಬಲಿಸುತ್ತದೆ ಎಂಬ ಆರೋಪವಿದೆ, ಆದರೆ ಇದಕ್ಕೆ ಯಾವುದೇ ಪುರಾವೆಗಳಿಲ್ಲ. ಇಷ್ಟೆಲ್ಲಾ ನಡೆಯುತ್ತಿದ್ದರೂ ಅಧ್ಯಕ್ಷ ಬುಹಾರಿ ಮಾತ್ರ ಮೂಖ ಪ್ರೇಕ್ಷಕನಾಗಿರುವುದು ಈ ಆರೋಪಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಹತ್ಯಾಕಾಂಡದ ನಿರ್ನಾಮಕ್ಕೆ ವಿಚಾರವಾದಿಗಳ ಸಲಹೆಗಳು
- ಹತ್ಯಾಕಾಂಡಗಳ ತನಿಖೆಗಾಗಿ ವಿಶ್ವಸಂಸ್ಥೆಯ ಆಯೋಗ ನೈಜೀರಿಯಾಕ್ಕೆ ಹೋಗಬೇಕು
- ಇಲ್ಲಿನ ಸ್ಥಿತಿಗತಿಯ ಕುರಿತು ಆಯೋಗವು ಮಾನವ ಹಕ್ಕುಗಳ ಮಂಡಳಿ ಮತ್ತು ಭದ್ರತಾ ಮಂಡಳಿಗೆ ವರದಿ ಸಲ್ಲಿಸಬೇಕು
- ನೈಜೀರಿಯಾದಲ್ಲಿನ ಚರ್ಚ್ಗಳು ಹತ್ಯಾಕಾಂಡಗಳ ಬಗ್ಗೆ ಎಚ್ಚರಿಕೆ ನೀಡಲು ಮತ್ತು ವರದಿ ಮಾಡಲು ಮಾನವ ಹಕ್ಕುಗಳ ಕೇಂದ್ರಗಳನ್ನು ರಚಿಸಬೇಕು
- ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಚರ್ಚ್ಗಳು ಒತ್ತಾಯಿಸಬೇಕು
- ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಮತ್ತು ಬಂಧಿಸಲು ಕಾನೂನು ಜಾರಿ ಮಾಡಬೇಕು
- ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು
- ನೈಜೀರಿಯನ್ ಪೊಲೀಸರು ಮತ್ತು ಸೈನ್ಯಕ್ಕೆ ತರಬೇತಿ ನೀಡಬೇಕು