ಖಾರ್ಟೌಮ್ (ಸುಡಾನ್): ಮ್ಯಾನ್ಮಾರ್, ಮಾಲಿ ದೇಶದ ಬಳಿಕ ಸುಡಾನ್ನಲ್ಲಿ ಮಿಲಿಟರಿ ಪಡೆ ದಂಗೆಯೆದ್ದಿದೆ. ಸುಡಾನ್‌ನ ಮಿಲಿಟರಿ ಆಡಳಿತವು ದೇಶದ ಅಧಿಕಾರವನ್ನು ಸೋಮವಾರ ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದು, ಪ್ರಧಾನಿ ಅಬ್ದುಲ್ಲಾ ಹಮ್ಡೋಕ್ ಸೇರಿದಂತೆ ಸಂಪುಟದ ಅನೇಕ ಸದಸ್ಯರನ್ನು ಬಂಧಿಸಿದೆ.
ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುವ ಸೇನಾ ದಂಗೆಯ ವಿರುದ್ಧ ಪ್ರತಿಭಟಿಸಲು ಸಾವಿರಾರು ಜನರು ರಾಜಧಾನಿ ಖಾರ್ಟೌಮ್ ಮತ್ತು ಅದರ ಅವಳಿ ನಗರವಾದ ಒಮ್ದುರ್ಮನ್‌ನಲ್ಲಿ ಬೀದಿಗಿಳಿದಿದ್ದಾರೆ. ಆದರೆ ಪ್ರತಿಭಟನಾಕಾರರ ಮೇಲೆ ಸೇನೆ ದಾಳಿ ನಡೆಸಿದ್ದು, 7 ಮಂದಿ ಮೃತಪಟ್ಟಿದ್ದಾರೆ. 140ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಏನಿದರ ಹಿನ್ನೆಲೆ?
1983 ರಿಂದ 30 ವರ್ಷಗಳ ಸುದೀರ್ಘ ಆಡಳಿತದ ಬಳಿಕ ನಿರಂಕುಶಾಧಿಕಾರಿ ಒಮರ್ ಅಲ್-ಬಶೀರ್ ನೇತೃತ್ವದ ಸರ್ಕಾರ 2019ರಲ್ಲಿ ಅಧಿಕಾರ ಕಳೆದುಕೊಂಡಿತ್ತು. ಬಶೀರ್ ಕೂಡ ಸೇನಾ ದಂಗೆಯ ಮೂಲವೇ ಅಧಿಕಾರಕ್ಕೆ ಬಂದವರಾಗಿದ್ದರು. 2019ರ ಆಗಸ್ಟ್ನಲ್ಲಿ ಅಬ್ದುಲ್ಲಾ ಹಮ್ಡೋಕ್ ಅವರು ಸುಡಾನ್ ನಾಗರಿಕ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆದರೆ ಹೊಸದಾಗಿ ಸ್ಥಾಪನೆಯಾಗಿದ್ದ ಅಬ್ದೆಲ್ ಫತ್ಹಾ ಅಲ್ ಬುರ್ಹಾನ್ ನೇತೃತ್ವದ ಸಾರ್ವಭೌಮತ್ವ ಮಂಡಳಿ ಜೊತೆ ಸುಡಾನ್ ಅಧಿಕಾರ ಹಂಚಿಕೆಯಾಗಿತ್ತು. ಎರಡೇ ವರ್ಷದಲ್ಲಿ ಈ ಸರ್ಕಾರವೂ ಪತನವಾಗಿದ್ದು, ಮಿಲಿಟರಿ ಮುಖ್ಯಸ್ಥರೂ ಆಗಿರುವ ಅಬ್ದೆಲ್ ಫತ್ಹಾ ಅಲ್ ಬುರ್ಹಾನ್ ಇಡೀ ದೇಶವನ್ನ ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.