ಬಮಾಕೊ (ಮಾಲಿ):ದಕ್ಷಿಣ ಏಷ್ಯಾದ ದೇಶ ಮ್ಯಾನ್ಮಾರ್ ಬಳಿಕ ಇದೀಗ ಪಶ್ಚಿಮ ಆಫ್ರಿಕಾದಲ್ಲಿರುವ ಮಾಲಿ ರಾಷ್ಟ್ರದಲ್ಲಿ ಮಿಲಿಟರಿ ಪಡೆ ದಂಗೆಯೆದ್ದಿದೆ. ದೇಶದ ಮಧ್ಯಂತರ ಅಧ್ಯಕ್ಷ ಬಹ್ ಎನ್ಡಾವ್ ಮತ್ತು ಪ್ರಧಾನಿ ಮೊಕ್ಟರ್ ಓವಾನೆ ಅವರನ್ನು ಅಲ್ಲಿನ ದಂಗೆಕೋರ ಸೈನಿಕರು ಬಂಧಿಸಿದ್ದಾರೆ.
9 ತಿಂಗಳ ಹಿಂದೆ ಅಧಿಕಾರವನ್ನು ವಶಪಡಿಸಿಕೊಂಡಿದ್ದ ಜುಂಟಾದ ಇಬ್ಬರು ಸದಸ್ಯರನ್ನು ಸರ್ಕಾರದ ಪುನರ್ರಚನೆಯಿಂದ ಕೈಬಿಟ್ಟ ಕೆಲವೇ ಗಂಟೆಗಳಲ್ಲಿ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಮಿಲಿಟರಿ ಪಡೆ ಬಂಧಿಸಿ, ಕಾಟಿ ಮಿಲಿಟರಿ ಪ್ರಧಾನ ಕಚೇರಿಗೆ ಕರೆದೊಯ್ದಿದೆ. ಇದನ್ನು ಖಂಡಿಸಿರುವ ಆಫ್ರಿಕನ್ ಒಕ್ಕೂಟ ಹಾಗೂ ವಿಶ್ವಸಂಸ್ಥೆ, ಅವರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ತಾಕೀತು ಮಾಡಿವೆ.
ಪಶ್ಚಿಮ ಆಫ್ರಿಕಾದ ಪ್ರಾದೇಶಿಕ ಬಣ ಇಕೋವಾಸ್ ( ECOWAS ) ಮತ್ತು ಅಂತಾರಾಷ್ಟ್ರೀಯ ಸಮುದಾಯದ ಇತರ ಸದಸ್ಯರು ಜಂಟಿ ಹೇಳಿಕೆಯನ್ನು ನೀಡಿದ್ದು, ಬಲವಂತದ ರಾಜೀನಾಮೆ ಸೇರಿದಂತೆ ಯಾವುದೇ ರೀತಿಯ ದಬ್ಬಾಳಿಕೆಯನ್ನು ಅಂತರರಾಷ್ಟ್ರೀಯ ಸಮುದಾಯವು ತಿರಸ್ಕರಿಸುತ್ತದೆ. ತಕ್ಷಣವೇ ಅವರಿಬ್ಬರನ್ನು ಬಿಡುಗಡೆ ಮಾಡಿ ಎಂದು ತಿಳಿಸಿವೆ.
ಮಾಲಿಯನ್ ಪರಿವರ್ತನೆಯ ನಾಗರಿಕ ಮುಖಂಡರನ್ನು ಬಂಧಿಸಿದ ಸುದ್ದಿ ಕೇಳಿ ನಾನು ತುಂಬಾ ಕಳವಳಗೊಂಡಿದ್ದೇನೆ. ನಾನು ಶಾಂತಿಯುತ ಮತ್ತು ಅವರ ಬೇಷರತ್ತಾದ ಬಿಡುಗಡೆಗಾಗಿ ಕರೆ ನೀಡುತ್ತೇನೆ. ರಾಜಕೀಯ ಪರಿವರ್ತನೆಗೆ ಸಹಕರಿಸಲು ನಮ್ಮ ವಿಶೇಷ ಪ್ರತಿನಿಧಿ ಇಕೋವಾಸ್, ಆಫ್ರಿಕನ್ ಒಕ್ಕೂಟ ಹಾಗೂ ಅಂತರರಾಷ್ಟ್ರೀಯ ಸಮುದಾಯದ ಸದಸ್ಯರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರೆಸ್ ಟ್ವೀಟ್ ಮಾಡಿದ್ದಾರೆ.
ಜುಂಟಾ, ಇದು ಮಾಲಿಯ ಮಿಲಿಟರಿ ನಾಯಕರ ಸಮಿತಿಯ ನೇತೃತ್ವದ ಸರ್ಕಾರವಾಗಿದೆ. 2020ರ ಆಗಸ್ಟ್ವರೆಗೂ ಬಲವಂತದ ಅಧಿಕಾರ ನಡೆಸುತ್ತಿದ್ದ ಜುಂಟಾ, ಸೆಪ್ಟೆಂಬರ್ನಲ್ಲಿ ನಾಗರಿಕ ಪರಿವರ್ತನಾ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಲು ಒಪ್ಪಿಕೊಂಡಿತು. ಹೀಗಾಗಿ ಬಹ್ ಎನ್ಡಾವ್ ಮತ್ತು ಮೊಕ್ಟರ್ ಓವಾನೆ ಅವರು ಮಾಲಿಯ ಅಧ್ಯಕ್ಷ ಮತ್ತು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ನಿನ್ನೆ ನೂತನ ಸಂಪುಟವನ್ನು ರಚಿಸಲಾಗಿದ್ದು, ಜುಂಟಾದ ಆಂತರಿಕ ಭದ್ರತಾ ಸಚಿವ ಮೋಡಿಬೋ ಕೋನ್ ಹಾಗೂ ರಕ್ಷಣಾ ಸಚಿವರಾಗಿದ್ದ ಸಾದಿಯೊ ಕ್ಯಾಮರಾ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಇದರ ಬೆನ್ನಲ್ಲೇ ಮಿಲಿಟರಿ ಪಡೆ ಅಧ್ಯಕ್ಷ ಮತ್ತು ಪ್ರಧಾನಿಯನ್ನ ಬಂಧಿಸಿದೆ.