ಕರ್ನಾಟಕ

karnataka

ETV Bharat / international

ಬೋಕೊ ಹರಮ್ ಉಗ್ರರ ರಕ್ತಸಿಕ್ತ ದಾಳಿಗಳ ಇತಿಹಾಸ ಇಲ್ಲಿದೆ ನೋಡಿ...! - ನೈಜೀರಿಯಾ

ಕೇವಲ ಎರಡು ದಿನಗಳ ಹಿಂದೆ ಅಂದರೆ ಜೂನ್ 9 ರಂದು ಈ ಬೋಕೊ ಹರಮ್ ಉಗ್ರಗಾಮಿಗಳು ನೈಋತ್ಯ ನೈಜೀರಿಯಾದ ಹಳ್ಳಿಯೊಂದರ ಮೇಲೆ ದಾಳಿ ಮಾಡಿ 81 ಜನರನ್ನು ಕೊಂದು ಅಟ್ಟಹಾಸ ಮೆರೆದಿದ್ದಾರೆ. ಶಸ್ತ್ರಸಜ್ಜಿತ ಟ್ಯಾಂಕ್​ಗಳು ಮತ್ತು ಲಾರಿಗಟ್ಟಲೆ ಗನ್​ಗಳನ್ನು ತಂದು ಜನರ ಮೇಲೆ ದಾಳಿ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬೋಕೊ ಹರಮ್ 2002 ರಿಂದಲೇ ಉಗ್ರಗಾಮಿ ದಾಳಿಗಳನ್ನು ನಡೆಸುತ್ತಿದೆ. ಕಳೆದ ಸುಮಾರು 18 ವರ್ಷಗಳ ಅವಧಿಯಲ್ಲಿ ಈ ಸಂಘಟನೆ ನಡೆಸಿದ ಪ್ರಮುಖ ದಾಳಿಗಳ ವಿವರ ಇಲ್ಲಿದೆ.

MAJOR ATTACKS OF BOKO HARAM
MAJOR ATTACKS OF BOKO HARAM

By

Published : Jun 11, 2020, 10:31 PM IST

ಬೋಕೊ ಹರಮ್ವಿಶ್ವದ ಕುಖ್ಯಾತ ಇಸ್ಲಾಮಿಕ್ ಭಯೋತ್ಪಾದನಾ ಸಂಘಟನೆಗಳಲ್ಲಿ ಒಂದಾಗಿದ್ದು, ಆಫ್ರಿಕಾದ ಅತಿ ಹೆಚ್ಚು ಜನಸಂಖ್ಯೆಯ ದೇಶಗಳಲ್ಲಿ ಭೀಕರ ಮಾರಣಹೋಮಗಳನ್ನು ನಡೆಸುತ್ತಿದೆ. ಬಾಂಬ್ ದಾಳಿ, ಶಿರಚ್ಛೇದನ ಮತ್ತು ಅಪಹರಣ ಮುಂತಾದ ಭಯೋತ್ಪಾದನಾ ಕೃತ್ಯಗಳನ್ನು ಈ ಸಂಘಟನೆ ಅವ್ಯಾಹತವಾಗಿ ನಡೆಸುತ್ತಿದೆ. ಪ್ರಸ್ತುತ ಅಧಿಕಾರದಲ್ಲಿರುವ ಸರಕಾರಗಳನ್ನು ಕೆಡವಿ ಇಸ್ಲಾಮಿಕ್ ರಾಷ್ಟ್ರ ನಿರ್ಮಾಣ ಮಾಡುವುದು ಬೋಕೊ ಹರಮ್ ಮುಖ್ಯ ಗುರಿಯಾಗಿದೆ.

ಪಾಶ್ಚಿಮಾತ್ಯ ಜೀವನ ಶೈಲಿಯನ್ನು ಅನುಕರಿಸುವುದು ಹರಾಮ್ ಅಥವಾ ನಿಷಿದ್ಧ ಎಂಬುದು ಬೋಕೊ ಹರಮ್ ಸಿದ್ಧಾಂತವಾಗಿದೆ. ಚುನಾವಣೆಗಳಲ್ಲಿ ಮತದಾನ ಮಾಡುವುದು, ಸೂಟ್ ಪ್ಯಾಂಟ್ ಧರಿಸುವುದು ಅಥವಾ ಜಾತ್ಯತೀತ ಮಾದರಿಯ ಶಿಕ್ಷಣ ಪಡೆಯುವುದು ಸಹ ಇವರ ಪ್ರಕಾರ ಅಪರಾಧವಾಗಿದೆ.

ಕೇವಲ ಎರಡು ದಿನಗಳ ಹಿಂದೆ ಅಂದರೆ ಜೂನ್ 9 ರಂದು ಈ ಬೋಕೊ ಹರಮ್ ಉಗ್ರಗಾಮಿಗಳು ನೈಋತ್ಯ ನೈಜೀರಿಯಾದ ಹಳ್ಳಿಯೊಂದರ ಮೇಲೆ ದಾಳಿ ಮಾಡಿ 81 ಜನರನ್ನು ಕೊಂದು ಅಟ್ಟಹಾಸ ಮೆರೆದಿದ್ದಾರೆ. ಶಸ್ತ್ರಸಜ್ಜಿತ ಟ್ಯಾಂಕ್​ಗಳು ಮತ್ತು ಲಾರಿಗಟ್ಟಲೆ ಗನ್​ಗಳನ್ನು ತಂದು ಜನರ ಮೇಲೆ ದಾಳಿ ಮಾಡಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬೋಕೊ ಹರಮ್ 2002 ರಿಂದಲೇ ಉಗ್ರಗಾಮಿ ದಾಳಿಗಳನ್ನು ನಡೆಸುತ್ತಿದೆ. ಕಳೆದ ಸುಮಾರು 18 ವರ್ಷಗಳ ಅವಧಿಯಲ್ಲಿ ಈ ಸಂಘಟನೆ ನಡೆಸಿದ ಪ್ರಮುಖ ದಾಳಿಗಳ ವಿವರ ಇಲ್ಲಿದೆ.

ಬೋಕೊ ಹರಮ್ ಬಗ್ಗೆ ಒಂದಿಷ್ಟು ಮಾಹಿತಿ:

- ಸ್ಥಳೀಯ ಹೌಸಾ ಭಾಷೆಯಲ್ಲಿ ಬೋಕೊ ಹರಮ್ ಎಂದರೆ "ಪಾಶ್ಚಿಮಾತ್ಯ ಶಿಕ್ಷಣದ ನಿಷೇಧ".

- ಬೋಕೊ ಹರಮ್ ಸಂಘಟನೆಯು ತನ್ನನ್ನು ತಾನು "ಜಮಾತ್ ಅಹ್ಲಿಸ್ ಸುನ್ನಾ ಲಿದ್ದಾ' ವಾತಿ ವಲ್ ಜಿಹಾದ್ ಎಂದು ಕರೆದುಕೊಳ್ಳುತ್ತದೆ.

- ಪ್ರವಾದಿ ಮಹಮ್ಮದರ ಸಂದೇಶಗಳನ್ನು ಜಾರಿಗೆ ತರುವುದೇ ತನ್ನ ಉದ್ದೇಶ ಎನ್ನುತ್ತದೆ.

- 2002 ರಲ್ಲಿ ಸಂಘಟನೆಯನ್ನು ಸ್ಥಾಪಿಸಲಾಯಿತು.

- ಆರಂಭದಲ್ಲಿ ಪಾಶ್ಚಿಮಾತ್ಯ ಜೀವನಶೈಲಿಯನ್ನು ವಿರೋಧಿಸುವುದೇ ಗುರಿಯಾಗಿತ್ತು.

- 2009 ರಲ್ಲಿ ಇಸ್ಲಾಮಿಕ್ ರಾಷ್ಟ್ರ ಸ್ಥಾಪನೆಗಾಗಿ ಉಗ್ರವಾದಿ ಚಟುವಟಿಕೆಗಳನ್ನು ಆರಂಭಿಸಿತು.

- 2013 ರಲ್ಲಿ ಬೋಕೊ ಹರಮ್ ಸಂಘಟನೆಯನ್ನು ಉಗ್ರವಾದಿ ಸಂಘಟನೆ ಎಂದು ಅಮೆರಿಕ ಘೋಷಿಸಿತು.

- 2014 ರಲ್ಲಿ ತಾನು ನಿಯಂತ್ರಿಸುವ ಪ್ರದೇಶಗಳನ್ನು ಕ್ಯಾಲಿಫೇಟ್ ಎಂದು ಬೋಕೊ ಹರಮ್ ಘೋಷಿಸಿತು.

ಬೋಕೊ ಹರಮ್​ ನಡೆಸಿದ ರಕ್ತಸಿಕ್ತ ದಾಳಿಗಳ ಇತಿಹಾಸ

- 2002: ಬಹುಶಃ 1990 ರಿಂದಲೇ ಅಸ್ತಿತ್ವದಲ್ಲಿದ್ದ ಬೋಕೊ ಹರಮ್, ಮುಸ್ಲಿಂ ಧರ್ಮಗುರು ಮೊಹಮ್ಮದ್ ಯೂಸುಫ್ ನೇತೃತ್ವದಲ್ಲಿ ಸಂಘಟಿತವಾಯಿತು. ಬೋರ್ನೊ ಎಂಬ ಪ್ರದೇಶವನ್ನು ತನ್ನ ಕೇಂದ್ರಸ್ಥಾನವನ್ನಾಗಿಸಿಕೊಂಡು ಕಾರ್ಯಾಚರಣೆ ಆರಂಭಿಸಿತು.

- ಡಿಸೆಂಬರ್ 2003: ನೈಜೀರಿಯಾ ಗಡಿ ಬಳಿಯ ಯೋಬೆ ಪ್ರಾಂತ್ಯದ ಹಲವಾರು ಪೊಲೀಸ್ ಸ್ಟೇಷನ್​ಗಳ ಮೇಲೆ ಬೋಕೊ ಹರಮ್ 200 ಉಗ್ರವಾದಿಗಳ ಬೆಂಬಲದೊಂದಿಗೆ ದಾಳಿ ನಡೆಸಿತು. ಇದು ಬೋಕೊ ಹರಮ್​ನ ಮೊದಲ ಉಗ್ರಗಾಮಿ ದಾಳಿ ಎನ್ನಲಾಗಿದೆ.

- ಜುಲೈ 2009: ಬಾವುಚಿ ಪ್ರಾಂತ್ಯದಲ್ಲಿ ಬೋಕೊ ಹರಮ್ ಅಧಿಪತ್ಯ ಸ್ಥಾಪಿಸತೊಡಗಿತು ಹಾಗೂ ನಂತರದ ದಿನಗಳಲ್ಲಿ ಬೋರ್ನೊ, ಕಾನೊ ಮತ್ತು ಯೋಬೆ ಪ್ರಾಂತ್ಯಗಳಿಗೆ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿತು. ಈ ಸಂದರ್ಭದಲ್ಲಿ ಉಗ್ರವಾದಿಗಳು ನೂರಾರು ಪೊಲೀಸ್ ಅಧಿಕಾರಿಗಳನ್ನು ಕೊಂದು ಹಾಕಿದರು. ಇದೇ ಸಮಯದಲ್ಲಿ ನಡೆಸಲಾದ ಜಂಟಿ ಮಿಲಿಟರಿ ಕಾರ್ಯಾಚರಣೆಯಲ್ಲಿ ಸುಮಾರು 700 ಬೋಕೊ ಉಗ್ರವಾದಿಗಳನ್ನು ಮಟ್ಟ ಹಾಕಲಾಯಿತು ಹಾಗೂ ಅದರ ಕೇಂದ್ರ ಸ್ಥಾನವಾಗಿದ್ದ ಮಸೀದಿಯೊಂದನ್ನು ಹಾಳುಗೆಡವಲಾಯಿತು. ಈ ದಾಳಿಯಲ್ಲಿ ಸಂಘಟನೆಯ ಪ್ರಮುಖ ಯೂಸುಫ್​ನನ್ನು ಪೊಲೀಸರು ಸೆರೆ ಹಿಡಿದರು ಹಾಗೂ ಮತ್ತೊಬ್ಬ ನಾಯಕ ಅಬೂಬಕರ್ ಶೇಕಾವು ಮೃತಪಟ್ಟನು. ಇದರ ನಂತರ ಸಂಘಟನೆಯ ಬಲ ಕುಗ್ಗಲಾರಂಭಿಸಿತು. ಯೂಸುಫ್ ಕೂಡ ಪೊಲೀಸ್ ಕಸ್ಟಡಿಯಲ್ಲಿ ಕೆಲದಿನಗಳ ನಂತರ ಮೃತಪಟ್ಟನು.

- ಸೆಪ್ಟೆಂಬರ್ 7, 2010: ಬಾವುಚಿ ಪ್ರಾಂತ್ಯದ ಜೈಲೊಂದರ ಮೇಲೆ 50 ಜನ ಬೋಕೊ ಉಗ್ರರು ದಾಳಿ ಮಾಡಿ 5 ಜನರನ್ನು ಕೊಂದುಹಾಕಿದರು ಹಾಗೂ 700 ಕೈದಿಗಳನ್ನು ಬಿಡಿಸಿಕೊಂಡು ಓಡಿ ಹೋದರು.

- ಮೇ 29, 2011: ನೈಜೀರಿಯಾದ ಅಧ್ಯಕ್ಷ ಗುಡ್ ಲಕ್ ಜೋನಾಥನ್ ಪ್ರಮಾಣ ವಚನ ಸಮಾರಂಭದ ವೇಳೆ ಬಾವುಚಿ ನಗರದ ಬಳಿ ಬೋಕೊ ಬಾಂಬ್ ದಾಳಿ ನಡೆಸಿ 10 ಜನರನ್ನು ಕೊಂದು ಹಾಕಿತು.

- ಆಗಸ್ಟ್ 26, 2011: ಅಬುಜಾದಲ್ಲಿರುವ ವಿಶ್ವಸಂಸ್ಥೆಯ ಆವರಣದಲ್ಲಿ ಕಾರ್​ ಬಾಂಬ್ ದಾಳಿ ನಡೆಸಲಾಯಿತು. ದಾಳಿಯಲ್ಲಿ 23 ಜನ ಸತ್ತು, 75 ಕ್ಕೂ ಹೆಚ್ಚು ಜನ ಗಾಯಗೊಂಡರು.

- ನವೆಂಬರ್ 4, 2011: ಯೋಬೊ, ದಮಾಟುರು ಮತ್ತು ಬೋರ್ನೊ ಪ್ರಾಂತ್ಯಗಳ ಹಲವಾರು ಕಡೆ ನಡೆದ ದಾಳಿಗಳಲ್ಲಿ 100ಕ್ಕೂ ಹೆಚ್ಚು ಜನ ಸಾವಿಗೀಡಾದರು.

- ಜನೇವರಿ 20, 2012: ಕಾನೊ ಪ್ರಾಂತ್ಯದ ಕಾನೊ ಪಟ್ಟಣದ ಮೇಲೆ ನಡೆಸಲಾದ ದಾಳಿಯಲ್ಲಿ 200 ಕ್ಕೂ ಹೆಚ್ಚು ಜನ ಮೃತಪಟ್ಟರು.

- ಜೂನ್ 2013: ವಿವಿಧ ಪ್ರಾಂತ್ಯಗಳಲ್ಲಿ ಸತತವಾಗಿ ಮೂರು ಭಾನುವಾರಗಳಂದು ನಡೆದ ದಾಳಿಗಳಲ್ಲಿ 50 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು.

- ಸೆಪ್ಟೆಂಬರ್ 17, 2013: ಬೋರ್ನೊ ಪ್ರಾಂತ್ಯದ ಬೆನಿಶೆಕ್ ಚೆಕ್ ಪೋಸ್ಟ್​ನಲ್ಲಿ ಮಿಲಿಟರಿ ವೇಷದಲ್ಲಿ ನಿಂತಿದ್ದ ಬೋಕೊ ಉಗ್ರರು 143 ಜನ ಪ್ರಯಾಣಿಕರನ್ನು ಕೊಂದರು.

- ಮೇ 20, 2014: ನೈಜೀರಿಯಾದ ಜೋಸ್ ನಗರದ ಮಾರುಕಟ್ಟೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 118 ಜನ ಹತರಾದರು.

- ಜೂನ್ 3-4, 2014: ಬೋರ್ನೊ ಪ್ರಾಂತ್ಯದಲ್ಲಿ ಬೋಕೊ ನಡೆಸಿದ ಬಾಂಬ್ ದಾಳಿಗಳಲ್ಲಿ 400 ರಿಂದ 500 ಕ್ಕೂ ಹೆಚ್ಚು ಜನ ಮೃತ ಪಟ್ಟರು.

- ಜುಲೈ 17, 2014: ಕಳೆದ ತಿಂಗಳು ಕುಮ್ಮಾಬ್ಜಾ ಗ್ರಾಮದಿಂದ ಬೋಕೊ ಹರಮ್ ಅಪಹರಿಸಿದ್ದ 57 ಬಾಲಕಿಯರು ತಪ್ಪಿಸಿಕೊಂಡು ಗ್ರಾಮಕ್ಕೆ ಮರಳಿದರು. ಆದರೂ ಇನ್ನೂ 400 ಶಾಲಾ ಬಾಲಕಿಯರು ಬೋಕೊ ಹರಮ್ ವಶದಲ್ಲಿದ್ದಾರೆ ಎಂದು ಹೇಳಲಾಗಿತ್ತು.

- ಜುಲೈ 17-20, 2014: ನೈಜೀರಿಯಾದ ದಂಬೋವಾ ನಗರದ ಮೇಲೆ ಬೋಕೊ ಉಗ್ರರು ದಾಳಿ ಆರಂಭಿಸಿದರು. ದಾಳಿ ಮುಗಿಯುವ ಹೊತ್ತಿಗೆ 66 ನಾಗರಿಕರು ಪ್ರಾಣ ಕಳೆದುಕೊಂಡಿದ್ದರು ಹಾಗೂ 15 ಸಾವಿರಕ್ಕೂ ಹೆಚ್ಚು ಜನ ಊರು ಬಿಟ್ಟು ಪಲಾಯನ ಮಾಡಿದ್ದರು.

- ಜನೇವರಿ 3, 2015: ನೈಜೀರಿಯಾದ ಬಾಗಾ ಪಟ್ಟಣದ ಮೇಲೆ ನೂರಾರು ಉಗ್ರಗಾಮಿಗಳು ದಾಳಿ ಆರಂಭಿಸಿದರು. ಬಹುದಿನಗಳ ಕಾಲ ನಡೆದ ಈ ದಾಳಿಯ ಸಮಯದಲ್ಲಿ ಎಲ್ಲೆಲ್ಲೂ ಹೆಣಗಳ ರಾಶಿ ಕಾಣಿಸುತ್ತಿತ್ತು. ಸುಮಾರು 2000 ಜನ ಈ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

- ಮಾರ್ಚ್ 12, 2015: ಈ ದಿನದಂದು ಐಸಿಸ್ ವಕ್ತಾರನೊಬ್ಬ ಆಡಿಯೋ ಮೆಸೇಜ್ ಒಂದನ್ನು ಬಿಡುಗಡೆ ಮಾಡಿದ್ದ. ಬೋಕೊ ಹರಮ್ ಐಸಿಸ್​ನೊಂದಿಗೆ ಕೈಜೋಡಿಸಲು ಬಯಸಿದೆ ಹಾಗೂ ಐಸಿಸ್ ಮುಖ್ಯಸ್ಥ ಅಬು ಬಕ್ರ ಅಲ್ ಬಗ್ದಾದಿ, ಬೋಕೊ ಹರಮ್ ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ ಎಂದು ಆಡಿಯೋದಲ್ಲಿ ತಿಳಿಸಿದ್ದ. ಇದೇ ದಿನ ಇರಾಕಿನ ರಮಾದಿ ಪಟ್ಟಣದ ಉತ್ತರದಲ್ಲಿರುವ ಇರಾಕಿ ಮಿಲಿಟರಿ ಬೇಸ್​ ಮೇಲೆ ದಾಳಿ ನಡೆಸಿದ ಐಸಿಸ್, 40 ಸೈನಿಕರ ಮಾರಣಹೋಮ ನಡೆಸಿತು.

- ಏಪ್ರಿಲ್ 25-26, 2015: ನೈರುತ್ಯ ನೈಜೀರಿಯಾದ ದಮಾಸಕ್ ಬಳಿ ಚಿಕ್ಕ ಮಕ್ಕಳು, ಮಹಿಳೆಯರು ಸೇರಿದಂತೆ 400 ಜನರ ಕಳೇಬರಗಳು ಪತ್ತೆಯಾದವು.

- ಜುಲೈ 1, 2015: ನೈಜೀರಿಯಾದ ನೈರುತ್ಯ ಪ್ರಾಂತ್ಯದ ಮೂರು ಹಳ್ಳಿಗಳ ಮೇಲೆ ದಾಳಿ ಮಾಡಿದ ಬೋಕೊ ಹರಮ್ ಕನಿಷ್ಠ 145 ಜನರನ್ನು ಕೊಂದು ಹಾಕಿತು.

- ಸೆಪ್ಟೆಂಬರ್ 3, 2015: ಕ್ಯಾಮೆರೂನ್​ನ ಕೇರಾವಾ ಬಳಿಯ ಮಾರುಕಟ್ಟೆಯ ಮೇಲೆ ಬೋಕೊ ಹರಮ್ ನಡೆಸಿದ ದಾಳಿಯಲ್ಲಿ ಕನಿಷ್ಠ 30 ಜನ ಮೃತಪಟ್ಟು 145 ಜನ ಗಂಭೀರವಾಗಿ ಗಾಯಗೊಂಡರು.

- ಸೆಪ್ಟೆಂಬರ್ 23, 2015: ನೈಜೀರಿಯಾದ ಮಿಲಿಟರಿ ಪಡೆ ಹಲವಾರು ಬೋಕೊ ಕ್ಯಾಂಪ್​ಗಳ ಮೇಲೆ ದಾಳಿ ಮಾಡಿ 241 ಮಕ್ಕಳು ಹಾಗೂ ಮಹಿಳೆಯರನ್ನು ರಕ್ಷಿಸಿತು. ಈ ಸಂದರ್ಭದಲ್ಲಿ 43 ಬೋಕೊ ಉಗ್ರವಾದಿಗಳನ್ನು ಬಂಧಿಸಲಾಯಿತು.

- ಫೆಬ್ರವರಿ 2016: ನೈಋತ್ಯ ನೈಜೀರಿಯಾದ ಎರಡು ಹಳ್ಳಿಗಳ ಮೇಲೆ ದಾಳಿ ಮಾಡಿದ ಬೋಕೊ ಉಗ್ರರು 30 ಜನರನ್ನು ಕೊಂದು ಹಾಕಿದರು. ಇದೇ ದಿನ ಇಬ್ಬರು ಮಹಿಳಾ ಆತ್ಮಹತ್ಯಾ ಬಾಂಬರ್​​ಗಳು ನಿರಾಶ್ರಿತ ಶಿಬಿರದ ಮೇಲೆ ದಾಳಿ ಮಾಡಿ 58 ಜನರ ಬಲಿ ಪಡೆದರು.

- ಏಪ್ರಿಲ್ 13, 2018: 2013 ರಿಂದೀಚೆಗೆ 1000 ಕ್ಕೂ ಹೆಚ್ಚು ಮಕ್ಕಳನ್ನು ಬೋಕೊ ಹರಮ್ ಅಪಹರಿಸಿದೆ ಎಂದು ಯುನಿಸೆಫ್ ಆರೋಪಿಸಿತು.

- ಜುಲೈ 27, 2019: ನೈಋತ್ಯ ನೈಜೀರಿಯಾದ ಹಳ್ಳಿಯೊಂದರಲ್ಲಿ ಶವ ಸಂಸ್ಕಾರದ ವೇಳೆ ದಾಳಿ ನಡೆಸಿದ ಬೋಕೊ ಹರಮ್ 65 ಜನರನ್ನು ಕೊಂದು ಹಾಕಿತು.

- ಮಾರ್ಚ್ 25, 2020: ಯೋಬೆ ಪ್ರಾಂತ್ಯದಲ್ಲಿ ದಾಳಿ ನಡೆಸಿದ ಬೋಕೊ ಉಗ್ರರು ಕನಿಷ್ಠ 50 ನೈಜೀರಿಯಾ ಸೈನಿಕರ ಮಾರಣಹೋಮ ನಡೆಸಿದರು.

- ಮೇ 20, 2020: ನೈಜೀರಿಯಾದ ಡಿಫ್ಫಾ ಪ್ರದೇಶದ ಮಿಲಿಟರಿ ಕ್ಯಾಂಪ್ ಮೇಲೆ ನಡೆದ ದಾಳಿಯಲ್ಲಿ 12 ಜನ ಸೈನಿಕರು ಹುತಾತ್ಮರಾದರು.

ABOUT THE AUTHOR

...view details