ಬೋಟ್ಸ್ವಾನಾ (ಆಫ್ರಿಕಾ):ದಕ್ಷಿಣ ಆಪ್ರಿಕಾದ ಬೋಟ್ಸ್ವಾನಾ ದೇಶದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು 350 ಕ್ಕೂ ಹೆಚ್ಚು ಆನೆಗಳು ನಿಗೂಢವಾಗಿ ಸಾವನ್ನಪ್ಪಿವೆ ಎಂದು ವರದಿಯಾಗಿದೆ.
ಬೋಟ್ಸ್ವಾನಾದ ಒಕವಾಂಗೊ ಹುಲ್ಲುಗಾವಲು ಪ್ರದೇಶ ಹಾಗೂ ಇಲ್ಲಿನ ಒಕವಾಂಗೊ ನದಿ ಹರಿಯುವ ಪ್ರದೇಶದಲ್ಲಿ ಕಳೆದ 2-3 ತಿಂಗಳುಗಳಿಂದ ಆನೆಗಳು ಒಂದೊಂದಾಗಿಯೇ ಸಾವನ್ನಪ್ಪುತ್ತಿವೆ. ಇಲ್ಲಿನ ಸರ್ಕಾರ ನೀಡಿರುವ ಅಂಕಿ-ಅಂಶಗಳ ಪ್ರಕಾರ ಈವರೆಗೆ 275 ಆನೆಗಳು ಸಾವನ್ನಪ್ಪಿವೆ. ಆದ್ರೆ ರಾಷ್ಟ್ರೀಯ ಉದ್ಯಾನ ಸಂರಕ್ಷಣಾ ಅಧಿಕಾರಿಗಳ ಪ್ರಕಾರ ಈ ಸಂಖ್ಯೆ 400 ಹೆಚ್ಚಿದೆಯಂತೆ.
ಯುನೈಟೆಡ್ ಕಿಂಗ್‌ಡಂ ಚಾರಿಟಿ ರಾಷ್ಟ್ರೀಯ ಉದ್ಯಾನದ ಸಂರಕ್ಷಣಾ ನಿರ್ದೇಶಕ ನಿಯಾಲ್ ಮೆಕಾನ್ ಪ್ರಕಾರ, ಕೆಲ ಆನೆಯ ಕಳೆಬರಗಳು ಹಳ್ಳಗಳ ಸುತ್ತಲೂ ರಾಶಿರಾಶಿಯಾಗಿ ಪತ್ತೆಯಾಗಿವೆ. ಇನ್ನೂ ಕೆಲ ಆನೆಗಳು ಮುಖದ ಭಾಗದಿಂದ ಮುಂದಕ್ಕೆ ಬಿದ್ದು ಅಪ್ಪಚ್ಚಿಯಾದ ರೀತಿಯಲ್ಲಿ ಸತ್ತು ಹೋಗಿವೆ.
ಇದೇ ಭಾಗದ ಸ್ಥಳೀಯರು ಹೇಳುವ ಪ್ರಕಾರ, ಅಲ್ಲೇ ಸಮೀಪದಲ್ಲಿದ್ದ ಜೀವಂತ ಆನೆಗಳು ದೈಹಿಕವಾಗಿ ದುರ್ಬಲಗೊಂಡು ನಿಶ್ಯಕ್ತ ರೀತಿಯಲ್ಲಿ ನಡೆದಾಡುತ್ತಿದ್ದವು. ತಾನು ಮುಂದೆ ನಡೆಯಬೇಕಾದ ದಿಕ್ಕು ತಿಳಿಯದೆ ವೃತ್ತಾಕಾರದಲ್ಲಿ ಮತ್ತೆ ಮತ್ತೆ ಹೋಗುತ್ತಿತ್ತಂತೆ. ಇದಕ್ಕೆ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ.
ನಿಂತಲ್ಲೇ ಕುಸಿದು ಸಾವನ್ನಪ್ಪಿರುವ ಆನೆ ಆನೆಗಳ ಸಾವಿಗೆ ಇವು ಕಾರಣವೇ?
- 2014 ರಿಂದಲೇ ಬೋಟ್ಸ್ವಾನಾದಲ್ಲಿ ಆನೆ ಬೇಟೆಯಾಡುವುದನ್ನು ನಿಷೇಧಿಸಲಾಗಿತ್ತು. ಆದ್ರೆ ಕಳೆದ ವರ್ಷ ಬೋಟ್ಸ್ವಾನಾದಲ್ಲಿ ಆನೆ ಬೇಟೆಯಾಡುವ ನಿಷೇಧವನ್ನು ರದ್ದುಪಡಿಸಲಾಗಿತ್ತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಆಕ್ರೋಶ ಹಾಗೂ ವಿರೋಧಕ್ಕೆ ಕಾರಣವಾಗಿತ್ತು. ಆನೆ ದಂತಕ್ಕಾಗಿ ದೊಡ್ಡ ಮಟ್ಟದ ಬೇಟೆ ನಡೆದು ಆನೆಗಳ ಸಾಮೂಹಿಕ ಹತ್ಯೆ ನಡೆದಿದೆ ಎಂಬ ಮಾತನ್ನೂ ತಳ್ಳಿಹಾಕುವಂತಿಲ್ಲ ಎಂದು ನಿಯಾಲ್ ಮೆಕಾನ್ ಆರೋಪಿಸಿದ್ದಾರೆ.
- ಸದ್ಯದ ಪರಿಸ್ಥಿತಿಯಲ್ಲಿ ಕೋವಿಡ್ -19ಸೋಂಕಿನಿಂದಲೂ ಆನೆ ಆನೆ ಸಾವನ್ನಪ್ಪಿರೋ ಸಾಧ್ಯತೆಗಳಿವೆ ಎಂದು ಮೆಕಾನ್ ಹೇಳಿದ್ದಾರೆ.
ಸದ್ಯ ಆನೆಗಳ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆನೆಯ ಸಾವಂತೂ ನಿಗೂಢವಾಗಿಯೇ ಉಳಿದಿದೆ. ಆನೆಗಳ ಈ ಸಾವು ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನ ಸಾಧ್ಯತೆಯನ್ನು ತೋರಿಸುತ್ತಿದೆ ಎಂದು ಮೆಕಾನ್ ಒತ್ತಿ ಹೇಳಿದ್ದಾರೆ.