ಮೊಗದಿಶು, ಸೊಮಾಲಿಯಾ:ಸೆಂಟ್ರಲ್ ಸೋಮಾಲಿಯಾದ ಸೊಮಾಲಿ ರಾಷ್ಟ್ರೀಯ ಸೇನೆ (SNA) ಮತ್ತು ಅರೆ ಸೈನಿಕ ಪಡೆಗಳು ಅಲ್ಲಿನ ಪ್ರಾದೇಶಿಕ ಪಡೆಯೊಂದರ ನಡುವೆ ಘರ್ಷಣೆಗೆ ಇಳಿದ ಪರಿಣಾಮ ಸುಮಾರು 20 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಲ್ಮುದುಗ್ ರಾಜ್ಯದಲ್ಲಿ ಸಂಘರ್ಷ ನಡೆದಿದ್ದು, ಅಲ್ಲಿನ ಗುರಿಯಲ್ ನಗರದ ಹೊರವಲಯದಲ್ಲಿ ಅಹ್ಲು ಸುನ್ನ ವಲ್ಜಾಮಾ (ASWJ) ಎಂಬ ಇಸ್ಲಾಮಿಕ್ ಗುಂಪೊಂದು ಸೋಮಲಿ ರಾಷ್ಟ್ರೀಯ ಸೇನೆ ಮತ್ತು ಅರೆ ಸೇನಾ ಪಡೆಗಳ ಮೇಲೆ ದಾಳಿ ಮಾಡಿದ ವೇಳೆ ಸಂಘರ್ಷ ಭುಗಿಲೆದ್ದಿದೆ ಎಂದು ಗಾಲ್ಮುದುಗ್ ವಾರ್ತಾ ಸಚಿವ ಅಹ್ಮದ್ ಶೈರ್ ಫಲಾಗ್ಲೆ ಅವರು ಕ್ಸಿನ್ಹುವಾ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದಾರೆ.
ಅಹ್ಲು ಸುನ್ನ ವಲ್ಜಾಮಾ ಸೇನೆಯೊಂದಿಗಿನ ಭೀಕರ ಹೋರಾಟದಲ್ಲಿ ಎಸ್ಎನ್ಎ ವಿಶೇಷ ಪಡೆಗಳ ಘಟಕದ ಕಮಾಂಡರ್ ಅಬ್ಡಿಲಾಡಿಫ್ ಫೈಲೆ ಸೇರಿದಂತೆ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಫಲಾಗ್ಲೆ ಕ್ಸಿನ್ಹುವಾ ಸುದ್ದಿಸಂಸ್ಥೆಗೆ ಸ್ಪಷ್ಟನೆ ನೀಡಿದ್ದಾರೆ. ಈಗ ಸೊಮಾಲಿ ರಾಷ್ಟ್ರೀಯ ಸೇನೆ ಮತ್ತು ಅರೆ ಸೈನಿಕ ಪಡೆಗಳು ನಗರದ ಮೇಲೆ ನಿಯಂತ್ರಣ ಸಾಧಿಸಿವೆ. ಇದರ ಜೊತೆಗೆ ಅಹ್ಲು ಸುನ್ನ ವಲ್ಜಾಮಾದ ಕೆಲವು ಸೈನಿಕರನ್ನು ಸೆರೆ ಹಿಡಿಯಲಾಗಿದೆ. ಮೂವರು ಸೈನಿಕರನ್ನು ನಾವು ಕಳೆದುಕೊಂಡಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಫಲಾಗ್ಲೆ ಮಾಹಿತಿ ನೀಡಿದ್ದಾರೆ.