ಸಹೇಲ್, ಬುರ್ಕಿನಾ ಫ್ಯಾಸೋ: ಭಯೋತ್ಪಾದಕರ ದಾಳಿಯೊಂದರಲ್ಲಿ 30 ನಾಗರಿಕರು, 14 ಮಂದಿ ಸೈನಿಕರು ಮತ್ತು 3 ಸೈನಿಕರ ಸಹಾಯಕ ಸಿಬ್ಬಂದಿ ಮೃತಪಟ್ಟಿರುವ ಘಟನೆ ಪಶ್ಚಿಮ ಆಫ್ರಿಕಾದ ದೇಶವಾದ ಬುರ್ಕಿನಾ ಫ್ಯಾಸೋದಲ್ಲಿ ಬುಧವಾರ ನಡೆದಿದೆ.
ಬುರ್ಕಿನಾ ಫ್ಯಾಸೋದ ಉತ್ತರ ಸಹೇಲ್ ಪ್ರಾಂತ್ಯದಲ್ಲಿ ಬುಧವಾರ ಭಯೋತ್ಪಾದಕರ ದಾಳಿ ನಡೆದಿದ್ದು, ಒಟ್ಟು 47 ಮಂದಿ ಸಾವನ್ನಪ್ಪಿದ್ದಾರೆ. 19 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಲ್ಲಿನ ಸಂವಹನ ಇಲಾಖೆಯಿಂದ ಬಿಡುಗಡೆಯಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸರ್ಕಾರದ ಪಡೆಗಳೂ ಕೂಡಾ ಭಯೋತ್ಪಾದಕರ ದಾಳಿ ವೇಳೆ ಪ್ರತಿಕ್ರಿಯೆ ನೀಡಿದ್ದು, ಸುಮಾರು 58 ಮಂದಿಯನ್ನು ಕೊಲ್ಲಲಾಗಿದೆ. ಕೆಲವರು ಗಾಯಗೊಂಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಈಗ ಭಯೋತ್ಪಾದಕ ದಾಳಿಗೆ ಒಳಗಾದ ಪ್ರದೇಶವನ್ನು ರಕ್ಷಣಾ ಸಿಬ್ಬಂದಿ, ವಾಲ್ಯುಯೆಂಟರ್ಸ್ ಫಾರ್ ದ ಡಿಫೆನ್ಸ್ನ ಆಫ್ ದ ಮದರ್ಲ್ಯಾಂಡ್ (ವಿಡಿಪಿ) ಹಾಗೂ ನಾಗರಿಕರು ಜಂಟಿಯಾಗಿ ಸಹೇಲ್ ಪ್ರಾಂತ್ಯದ ಗೋರ್ಗಾಡ್ಜಿ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ.
2015ರಿಂದ ಬುರ್ಕಿನಾ ಫ್ಯಾಸೋದಲ್ಲಿ ಭದ್ರತೆ ಕನಿಷ್ಠ ಮಟ್ಟದಲ್ಲಿದೆ. ಈವರೆಗೆ ಭಯೋತ್ಪಾದಕರ ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ನಾಗರಿಕರು ಮೃತಪಟ್ಟಿದ್ದು, 10 ಲಕ್ಷಕ್ಕೂ ಹೆಚ್ಚು ಮಂದಿ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಈ ಭೀಕರ ದಾಳಿಯಲ್ಲಿ ಮಡಿದ ಸಾರ್ವಜನಿಕರು, ಸೇನಾ ಸಿಬ್ಬಂದಿಗೆ ಸಂತಾಪ ಸೂಚಿಸುವ ಸಲುವಾಗಿ ಬುರ್ಕಿನಾ ಫ್ಯಾಸೋ ರಾಷ್ಟ್ರದಲ್ಲಿ 72 ಗಂಟೆಗಳ ಶೋಕಾಚರಣೆಯನ್ನು ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ:ಸಾವಿಗೆ ಹೆದರುವುದಿಲ್ಲ, ಅಫ್ಘನ್ ವಾಪಸಾಗುವ ಮಾತುಕತೆ ನಡೆಯುತ್ತಿದೆ: ಮೌನ ಮುರಿದ ಅಶ್ರಫ್ ಘನಿ..