ಅಬುಜಾ (ನೈಜೀರಿಯಾ) :ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಎರಡು ಗುಂಪುಗಳ ಮೇಲೆ ನೈಜೀರಿಯಾದ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದರಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಮ್ನೆಸ್ಟಿ ಇಂಟರ್ನ್ಯಾಷನಲ್ ವರದಿ ಮಾಡಿದೆ.
ಲಾಗೋಸ್ನಲ್ಲಿ ಪೊಲೀಸರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಜನತೆ ''ಸಾರ್ಸ್ ಅಂತ್ಯಗೊಳಿಸಿ'' (End SARS) ಎಂಬ ಚಳವಳಿ ಹಮ್ಮಿಕೊಂಡಿದ್ದರು. ಇದನ್ನು ತಡೆಯಲು ಸರ್ಕಾರ ಅನಿರ್ಧಿಷ್ಟಾವಧಿ ಕರ್ಫ್ಯೂ ಹೇರಿದ್ದು, ಕರ್ಫ್ಯೂ ಧಿಕ್ಕರಿಸಿ ಲೆಕ್ಕಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 7 ಗಂಟೆಗೆ ಪ್ರತಿಭಟನೆ ನಡೆಸಲಾಗುತ್ತಿತ್ತು.
ಈ ವೇಳೆ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಘಟನೆಯ ವೇಳೆ ಸ್ಥಳದಲ್ಲಿ ನೂರಾರು ಮಂದಿ ಇದ್ದು, 12 ಮಂದಿ ಸಾವನ್ನಪ್ಪಿ ಕೆಲವರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಏನಿದು ''ಸಾರ್ಸ್ ಅಂತ್ಯಗೊಳಿಸಿ'' ಹೋರಾಟ.?
ಸಾರ್ಸ್ (Special Anti-Robbery Squad) ಎಂಬುದು ನೈಜೀರಿಯನ್ ಪೊಲೀಸ್ ಫೋರ್ಸ್ನ ವಿವಾದಾತ್ಮಕ ಅಂಗವಾಗಿದ್ದು, 1992ರಲ್ಲಿ ಆರಂಭವಾಗಿತ್ತು. ಜನರಿಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ 2017ರಿಂದ ಈ ಪಡೆಯ ವಿರುದ್ಧ ಜನಾಂದೋಲನ ಶುರುವಾಗಿತ್ತು.
ಕೆಲವು ದಿನಗಳ ಹಿಂದೆ ಈ ಪಡೆ ಲಾಗೋಸ್ ಎಂಬಲ್ಲಿ ಸಾರ್ಸ್ ಹಿಂಸಾಚಾರ ಸೃಷ್ಟಿ ಮಾಡಿತ್ತು ಆರೋಪದ ಮೇಲೆ ಅಲ್ಲಿನ ಜನತೆ ಈ ಪಡೆಯ ವಿರುದ್ಧ ತಿರುಗಿಬಿದ್ದರು. ದೇಶಾದ್ಯಂತ #Endsars ಎಂಬ ಹ್ಯಾಷ್ಟ್ಯಾಗ್ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಭಟನೆಗಳು ತೀವ್ರಗೊಂಡವು.
ಅಲ್ಲಲ್ಲಿ ''ಸಾರ್ಸ್ ಅಂತ್ಯಗೊಳಿಸಿ'' ಪ್ರತಿಭಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕರ್ಫ್ಯೂ ಘೋಷಣೆ ಮಾಡಿದ್ದು, ಕರ್ಫ್ಯೂ ಧಿಕ್ಕರಿಸಿ ಲೆಕ್ಕಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಲಾಗುತ್ತಿತ್ತು. ಈ ವೇಳೆ ಅಲ್ಲಿನ ಭದ್ರತಾ ಪಡೆ ಗುಂಡಿನ ದಾಳಿ ನಡೆಸಿದೆ.