ರಾಯ್‌ಪುರ್:ನಕಲಿ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯ ಹಿರಿಯ ಮುಖಂಡ ಮತ್ತು ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಹೇಳಿಕೆಗಳನ್ನು ರಾಯ್ಪುರ ಪೊಲೀಸರು ದಾಖಲಿಸಿದ ಮರು ದಿನವೇ ಪೊಲೀಸರ ಮುಂದೆ ಲಿಖಿತ ಪತ್ರವನ್ನು ಸಲ್ಲಿಸಿದ್ದಾರೆ.
ಹಾಗೆಯೇ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರಾಕರಿಸಿದ್ದು, ಈ ವಿಷಯದ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸೋನಿಯಾ ಗಾಂಧಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜನರನ್ನು ಗೊಂದಲಕ್ಕೀಡು ಮಾಡಲು ಕಾಂಗ್ರೆಸ್ ಪಕ್ಷ ಸಂಚು ರೂಪಿಸುತ್ತಿದೆ ಎಂದು ಸಿಂಗ್ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಡೆಸುತ್ತಿರುವ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅಡ್ಡಿಪಡಿಸಲು ಹಾಗೆ ಅಪಖ್ಯಾತಿಗೊಳಿಸಲು ಕಾಂಗ್ರೆಸ್ ತನ್ನ ಕಾರ್ಯಕರ್ತರಿಗೆ ನಿರ್ದೇಶನ ನೀಡುತ್ತಿದೆ. ಈ ಕೃತ್ಯದಿಂದ ಬೇಸರಗೊಂಡ ನಾನು ಸಾರ್ವಜನಿಕರಿಗೆ ಸರಿಯಾದ ಸಂಗತಿಗಳನ್ನು ಹೇಳುವ ಉದ್ದೇಶದಿಂದ ಮೇ 18 ರಂದು ಟ್ವೀಟ್ ಮಾಡಿದ್ದೇನೆ. ಟ್ವೀಟ್‌ನ ಉದ್ದೇಶ ಸತ್ಯವನ್ನು ಹೊರತರುವುದು ಮತ್ತು ಸಾಮಾನ್ಯ ಜನರಲ್ಲಿನ ಗೊಂದಲವನ್ನು ತೆಗೆದುಹಾಕುವುದಷ್ಟೇ ಎಂದು ಸಿಂಗ್ ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ನಾನು ಟ್ವೀಟ್ ಮಾಡಿದ್ದೇನೆ. ಇದರ ಮೇಲೆ ಮತ್ತೊಮ್ಮೆ ಆಧಾರ ರಹಿತ ಎಫ್ಐಆರ್ ಅನ್ನು ರಾಜ್ಯ ಸರ್ಕಾರದ ಒತ್ತಡದಲ್ಲಿ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.