ಬೆಂಗಳೂರು:ಸುಮಾರು ಒಂದೂವರೆ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ರಾಜಧಾನಿ ಬೆಂಗಳೂರಿನಲ್ಲಿ ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಇರುವ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಸುಧಾರಿಸಲು ರಾಜ್ಯ ಕೋವಿಡ್ ಕಾರ್ಯಪಡೆಯು ತಜ್ಞರ ವರದಿ ಪಡೆಯಲು ನಿರ್ಧರಿಸಿದೆ. ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ನೇತೃತ್ವದಲ್ಲಿ ಇಂದು ನಡೆದ ಕಾರ್ಯಪಡೆ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಗಿದೆ. ಸಭೆಯ ನಂತರ ಡಿಸಿಎಂ ಮಾಹಿತಿ ನೀಡಿದರು.
ಡಿಸಿಎಂ ಇಟ್ಟ ಪ್ರಸ್ತಾಪನೆ ಏನು?
ಬೆಂಗಳೂರು ನಗರ ಆರೋಗ್ಯ ವ್ಯವಸ್ಥೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ ತೆಗೆದು ಆರೋಗ್ಯ ಇಲಾಖೆಗೆ ವಹಿಸುವುದು. ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 100 ಹಾಸಿಗೆಗಳ ಸುಸಜ್ಜಿತ, ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳುಳ್ಳ ಸೆಕೆಂಡರಿ ಆಸ್ಪತ್ರೆ ಸ್ಥಾಪನೆ, ನಾಲ್ಕು ವಿಧಾನಸಭೆ ಕ್ಷೇತ್ರಗಳಿಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುವುದು.
ಮಧ್ಯಮ ವರ್ಗ ಹಾಗೂ ಬಡವರಿಗೆ ಚಿಕಿತ್ಸೆ ಬಹಳ ದುಬಾರಿಯಾಗಿದೆ. ಇರುವ ಬೌರಿಂಗ್, ವಿಕ್ಟೋರಿಯಾ, ಕೆ.ಸಿ.ಜನರಲ್ ನಂತಹ ಆಸ್ಪತ್ರೆಯಲ್ಲಿ ಒತ್ತಡ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಈ ಆಸ್ಪತ್ರೆಗಳಲ್ಲಿ ನಗರದಲ್ಲಿ ವಾಸ ಮಾಡುವ ಕಟ್ಟಕಡೆಯ ವ್ಯಕ್ತಿಗೂ ಅತ್ಯುತ್ತಮ ಚಿಕಿತ್ಸೆ ಕೊಡಬೇಕಿದೆ. ನಗರದಲ್ಲಿ ಸರ್ಕಾರದ ಉಸ್ತುವಾರಿಯಲ್ಲಿ ಅನೇಕ ಆಸ್ಪತ್ರೆಗಳಿವೆ. ಈ ಪೈಕಿ ಕೆಲವು ವೈದ್ಯ ಶಿಕ್ಷಣ ಇಲಾಖೆ, ಇನ್ನು ಕೆಲವು ಆರೋಗ್ಯ ಇಲಾಖೆ, ಮತ್ತೆ ಇನ್ನು ಕೆಲವು ಬಿಬಿಎಂಪಿ ಅಧೀನದಲ್ಲಿವೆ. ಹೀಗಾಗಿ ಸರಿಯಾದ ಸಮನ್ವಯತೆ ಇಲ್ಲ, ಹೊಂದಾಣಿಕೆ ಕಾಣುತ್ತಿಲ್ಲ. ಪರಿಣಾಮ ಜನರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಹೀಗಾಗಿ ಈ ಎಲ್ಲ ಆಸ್ಪತ್ರೆಗಳನ್ನು ಒಟ್ಟಾರೆಯಾಗಿ ಆರೋಗ್ಯ ಇಲಾಖೆಯ ಅಧೀನಕ್ಕೆ ತಂದು ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆ ಮಾಡುವುದು ಒಳ್ಳೆಯದು ಎಂದು ಡಿಸಿಎಂ ಪ್ರಸ್ತಾಪಿಸಿದರು. ಇಡೀ ಬೆಂಗಳೂರಿನ ಆರೋಗ್ಯ ವ್ಯವಸ್ಥೆಯ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು.