ಬೆಳಗಾವಿ: ಮಂಗಳಾ ಅಂಗಡಿ ಅವರಿಗೆ ಚುನಾವಣೆ ಆಯೋಗ ಉಪಚುನಾವಣೆಯಲ್ಲಿ ಗೆದ್ದಿರುವ ಸರ್ಟಿಫಿಕೇಟ್ ನೀಡಿರಬಹುದು. ಆದರೆ, ಆ ಸರ್ಟಿಫಿಕೇಟ್ ನಾನು ರಾಜ್ಯದ ಜನರಿಂದ ಪಡೆದಿದ್ದೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಕಾಂಗ್ರೆಸ್ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ನಮ್ಮ ಲೆಕ್ಕಾಚಾರಲ್ಲಿ 70 ಸಾವಿರ ಮೈನಸ್ ಇತ್ತು, ನಮ್ಮ ಜನರು ನನ್ನನ್ನು ಗೆಲುವಿನ ದಡ ಸೇರಿಸಿದ್ದಾರೆ. ತೀವ್ರ ಪೈಪೋಟಿ ನೀಡಿದ್ದೇವೆ. ಬಿಜೆಪಿಗೆ ನಮ್ಮ ಶಕ್ತಿ ಏನು ಎಂಬುವುದನ್ನು ಚುನಾವಣೆ ಮೂಲಕ ಉತ್ತರ ನೀಡಿದ್ದೇವೆ ಎಂದರು.
ಜನತೆ ವಿಶ್ವಾಸಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಚುನಾವಣೆ ಸೋತಿರಬಹುದು. ಆದರೆ, ಪಕ್ಷಕ್ಕೆ ಬಹಳಷ್ಟು ಲಾಭವಾಗಿದೆ. ರಾಜ್ಯದ ಜನತೆಯ ಚಿತ್ತ ಬೆಳಗಾವಿ ಚುನಾವಣೆ ಮೇಲೆ ನೆಟ್ಟಿತ್ತು ಅಷ್ಟು ಸಾಕು, ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ನಗೆ ಬೀರಿದರು.
ಈ ಚುನಾವಣೆಯಲ್ಲಿ ನಾವು ಸೋತರೂ, ನಾವೇ ಗೆದ್ದಿದ್ದೇವೆ. ಟೆಕ್ನಿಕಲ್ ಆಗಿ ಚುನಾವಣೆ ಸೋತಿದ್ದೇವೆ ಅಷ್ಟೇ. ಎಂಟು ಕ್ಷೇತ್ರದ ಶಾಸಕರು, ಮಾಜಿ ಶಾಸಕರು ನಮ್ಮ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಿಶೇಷವಾಗಿ ಈ ಚುನಾವಣೆಯಲ್ಲಿ ಸ್ವಯಂ ಪ್ರೇರಣೆಯಿಂದ ಜನರು ನಮ್ಮ ಪರ ಪ್ರಚಾರ ಮಾಡಿದ್ದಾರೆ ಅವರಿಗೆ ಧನ್ಯವಾದಗಳು. ಸತೀಶ ಜಾರಕಿಹೊಳಿ ಗೆಲುವಿಗೆ ಜನತೆ ಹಗಲಿರುಳು ಶ್ರಮಿಸಿದ್ದಾರೆ. ಇಲ್ಲಿ ಪ್ರಚಾರ ನಡೆಸಿ, ಮಸ್ಕಿ ಚುನಾವಣೆಗೆ ಎಂಟ್ರಿ ಕೊಟ್ಟಿದು ಒಳ್ಳೆಯ ಫಲಿತಾಂಶ ಸಿಕ್ಕಿದೆ ಎಂದರು.