ಮೈಸೂರು:ದೇಶದಲ್ಲಿ ಕೋವಿಡ್ ಸೋಂಕಿತರು ಮೃತಪಟ್ಟ ನಂತರ ಅವರ ಅಂತ್ಯಸಂಸ್ಕಾರ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ ಎಂಬ ಆರೋಪಗಳ ನಡುವೆ ಮೈಸೂರು ಮಹಾನಗರ ಪಾಲಿಕೆ ಕೋವಿಡ್ ಸೋಂಕಿತರ ಶವಸಂಸ್ಕಾರವನ್ನು ವ್ಯವಸ್ಥಿತ ರೀತಿಯಲ್ಲಿ ಮಾಡುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ. ಈ ಕುರಿತು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ 'ಈಟಿವಿ ಭಾರತ'ಕ್ಕೆ ನೀಡಿದ ಕಿರು ಸಂದರ್ಶನ ಇಲ್ಲಿದೆ.
ದೇಶಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ ಕೋವಿಡ್ ಸೋಂಕಿತರು ಮೃತಪಟ್ಟ ನಂತರ ಅವರ ಅಂತ್ಯಸಂಸ್ಕಾರ ವ್ಯವಸ್ಥಿತ ರೀತಿಯಲ್ಲಿ ಆಗಬೇಕು. ಮೃತರ ಕುಟುಂಬದ ನೋವಿನಲ್ಲೂ ನಾವು ಭಾಗಿಯಾಗಬೇಕು ಎಂಬ ದೃಷ್ಟಿಯಿಂದ ನಗರದ 4 ಕಡೆ ಮೃತ ಸೋಂಕಿತರ ಶವಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದೆ. ವಿದ್ಯುತ್ ಅನಿಲ ಹಾಗೂ ಕಟ್ಟಿಗೆಯಿಂದ ಅಂತ್ಯಕ್ರಿಯೆಯ ವ್ಯವಸ್ಥೆ ಇದೆ. ಅದಕ್ಕಾಗಿ ಪಾಲಿಕೆಯ ಸಿಬ್ಬಂದಿ, ಸ್ವಯಂ ಸೇವಕರು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ಆಯುಕ್ತರು ತಿಳಿಸಿದರು. ಅಲ್ಲದೆ, ನಾವು ಪ್ರತಿದಿನ ಸಾವಿನ ಸಂಖ್ಯೆ ಕಡಿಮೆಯಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇವೆ. ಆದರೂ ಸಾವು ಸಂಭವಿಸಿದಾಗ ತಡಮಾಡದೇ ವಿಧಿವಿಧಾನಗಳಂತೆ ಪೂಜೆ ಮಾಡಲು ಕುಟುಂಬಕ್ಕೆ ಅವಕಾಶವನ್ನು ನೀಡಿ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತೇವೆ ಎಂದರು.
ಕೋವಿಡ್ ಸೋಂಕಿತರು ಸಾವನ್ನಪ್ಪಿದ ನಂತರ ಅವರನ್ನು ಅಂತ್ಯಕ್ರಿಯೆ ಮಾಡಲು ಪರದಾಡುತ್ತಿರುವ ದೃಶ್ಯಗಳನ್ನು ಬೆಳಗಾವಿ, ಬೆಂಗಳೂರು ಹಾಗೂ ದೇಶದ ಇತರ ಭಾಗದಲ್ಲಿ ನೋಡಿದ್ದೇವೆ. ಆ ರೀತಿ ಆಗಬಾರದು ಎಂದು ಮೈಸೂರಿನಲ್ಲಿ ಈ ಸುವ್ಯವಸ್ಥೆ ಮಾಡಿದ್ದು, ಯಾವುದೇ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಕೊನೆಯುಸಿರೆಳೆದರೆ ಆ ವ್ಯಕ್ತಿಯ ಅಂತ್ಯಸಂಸ್ಕಾರ ಯಾವ ಶವಾಗಾರದಲ್ಲಿ ನಡೆಯಬೇಕು, ಅಲ್ಲಿಗೆ ಯಾವ ಆ್ಯಂಬುಲೆನ್ಸ್ ಹೋಗಬೇಕು ಎಂಬ ಬಗ್ಗೆ ನೆಟ್ವರ್ಕ್ ವ್ಯವಸ್ಥೆ ಮಾಡಿಕೊಂಡಿದೆ. ಶವ ತಂದ ಆ್ಯಂಬುಲೆನ್ಸ್ಗಳು ಯಾವ ಕಾರಣಕ್ಕೂ ಶವಾಗಾರದ ಮುಂದೆ ಕ್ಯೂ ನಿಲ್ಲದ ರೀತಿಯಲ್ಲಿ ನೋಡಿಕೊಳ್ಳುತ್ತೇವೆ. ಇದರ ಜೊತೆಗೆ ಆಸ್ಪತ್ರೆಯಿಂದ ಶವಾಗಾರಕ್ಕೆ ಉಚಿತವಾಗಿ ಆ್ಯಂಬುಲೆನ್ಸ್ನಲ್ಲಿ ಶವ ಸಾಗಿಸಲಾಗುವುದು. ಅಂತ್ಯಕ್ರಿಯೆಯು ಉಚಿತವಾಗಿ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ 'ಈಟಿವಿ ಭಾರತ'ಕ್ಕೆ ವಿಸ್ತೃತ ಮಾಹಿತಿ ನೀಡಿದರು.
ದೇಶಕ್ಕೆ ಮಾದರಿಯಾದ ಮೈಸೂರು ಮಹಾನಗರ ಪಾಲಿಕೆ ಇದರ ಜೊತೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಾಗಿ ಮಾಡುತ್ತಿದ್ದು, ಸೋಂಕಿತರನ್ನು ಆರಂಭದಲ್ಲೇ ಗುರುತಿಸಿದರೆ ಚಿಕಿತ್ಸೆ ಸುಲಭವಾಗುತ್ತದೆ ಎಂಬ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ. 15 ದಿನಗಳಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.