ಬೆಂಗಳೂರು:ದೇಶದ್ರೋಹದಂತಹ ಗಂಭೀರ ಸ್ವರೂಪದ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಾ ಕಾಯಿದೆ (ಯುಎಪಿಎ) ಅಡಿ ದಾಖಲಾಗಿರುವ ಅಪರಾಧ ಪ್ರಕರಣಗಳಲ್ಲಿ ಬೇಲ್ ಇಸ್ ರೂಲ್ (ಬೇಲ್ ಒಂದು ನಿಯಮ) ಮಂತ್ರ ಪಠಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, 2020 ರಲ್ಲಿ ಬೆಂಗಳೂರಿನಲ್ಲಿ ನಡೆದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಭೆಯ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ ತಮ್ಮ ಜಾಮೀನು ಅರ್ಜಿ ತಿರಸ್ಕರಿಸಿದ್ದ ಕ್ರಮ ಪ್ರಶ್ನಿಸಿ ಗಲಭೆ ಪ್ರಕರಣದ ಆರೋಪಿ ಇಮ್ರಾನ್ ಆಹಮದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ ಅವರಿದ್ದ ವಿಭಾಗೀಯಪೀಠ ಈ ಆದೇಶ ಮಾಡಿದೆ.
ಮೊದಲಿಗೆ ಆರೋಪಿ ಎದುರಿಸುತ್ತಿರುವಂತಹ ಗಂಭೀರ ಅಪರಾಧಗಳ ವಿಚಾರ ಬಂದಾಗ ಬೇಲ್ ರೂಲ್ ಮಂತ್ರ ಮೈಲು ದೂರು ನಿಲುತ್ತದೆ. ಎರಡನೇಯದಾಗಿ ಈ ಪ್ರಕರಣದಲ್ಲಿ ದೇಶ ದ್ರೋಹದಂತಹ ಗಂಭೀರ ಸ್ವರೂಪದ ಅಪರಾಧಗಳನ್ನು ಹತ್ತಿಕ್ಕಲು ಸಂಸತ್ ಶಾಸನ ರೂಪಿಸಿರುವುದು ಪರಿಗಣಿಸಬೇಕಾಗುತ್ತದೆ. ಮೂರನೇಯದಾಗಿ ಈ ಪ್ರಕರಣದ ಆರೋಪವನ್ನು ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿರಲಿದೆ. ಅಲ್ಲದೇ, ಸಂವಿಧಾನದ ಪ್ರಕಾರ ವೈಯಕ್ತಿಕ ಸ್ವಾತಂತ್ರ್ಯ ಇದ್ದರೂ ಸಮಾಜದ ಒಟ್ಟಾರೆ ಹಿತದೃಷ್ಟಿ ಮತ್ತು ಸಾರ್ವಜನಿಕ ಸುರಕ್ಷತೆ ದೃಷ್ಟಿಯಿಂದ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ತಿಳಿಸಿದೆ.
ನಿತ್ಯ ವಿಚಾರಣೆ ನಡೆಸಲು ನಿರ್ದೇಶನ:ಪ್ರಕರಣದಲ್ಲಿ ಹಲವು ಆರೋಪಿಗಳ ಜಾಮೀನು ಅರ್ಜಿಗಳನ್ನು ಇತರ ನ್ಯಾಯಪೀಠಗಳು ವಜಾಗೊಳಿಸಿರುವ ಅಂಶವನ್ನು ಉಲ್ಲೇಖಿಸಿರುವ ನ್ಯಾಯಪೀಠ, ಪ್ರಸ್ತುತ ಪ್ರಕರಣದಲ್ಲಿ ಆರೋಪಿಗಳಿಗೆ ತ್ವರಿತ ನ್ಯಾಯ ಕೇಳುವ ಎಲ್ಲಾ ಸಾಂವಿಧಾನಿಕ ಹಕ್ಕು ಇದೆ. ಇದು ತ್ವರಿತ ವಿಚಾರಣೆಗೆ ಹೇಳಿ ಮಾಡಿಸಿದ ಪ್ರಕರಣ. ಸಾಧ್ಯವಾದರೆ ಪ್ರತಿದಿನ ವಿಚಾರಣೆ ನಡೆಸಬೇಕು ಎಂದು ಪೀಠ ಹೇಳಿದೆ.