ಕರ್ನಾಟಕ

karnataka

ಹಿಂದಿ ರಾಷ್ಟ್ರ ಭಾಷೆಯಲ್ಲ, ರಾಷ್ಟ್ರ ಭಾಷೆಯೆಂಬ ಕಲ್ಪನೆ ಸಂವಿಧಾನದಲ್ಲಿಲ್ಲ: ಹೆಚ್​​ಡಿಕೆ

By

Published : Sep 14, 2020, 10:43 AM IST

ಹಿಂದಿ ರಾಷ್ಟ್ರಭಾಷೆಯಲ್ಲ, ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದು ಬಂದಿದೆ. ಇಂತಹ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ
ಕುಮಾರಸ್ವಾಮಿ

ಬೆಂಗಳೂರು: ವಿವಿಧ ಭಾಷೆ, ವಿಭಿನ್ನ ಸಂಸ್ಕೃತಿ, ಪರಂಪರೆಗಳನ್ನು ಒಡಲಲ್ಲಿಟ್ಟುಕೊಂಡ ಭಾರತದಲ್ಲಿ ಕನ್ನಡಿಗರೂ ಸೇರಿದಂತೆ ಅನ್ಯ ಭಾಷಿಕರ ಮೇಲೆ ಹಿಂದಿಯನ್ನು ಬಲವಂತವಾಗಿ ಹಲವು ಮಾರ್ಗಗಳ ಮೂಲಕ ಹೇರಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಇಂದಿನ ಹಿಂದಿ ದಿವಸ್ ಕೂಡ ಅಂತಹದ್ದೇ ಅಪಮಾರ್ಗ. ಭಾಷಾ ಅಹಂಕಾರದ ಸಂಕೇತವಾದ ಹಿಂದಿ ದಿವಸಕ್ಕೆ ಸ್ವಾಭಿಮಾನಿ ಕನ್ನಡಿಗರ ಪ್ರಬಲ ವಿರೋಧವಿದೆ ಎಂದು ಹೇಳಿದ್ದಾರೆ.

ಕುಮಾರಸ್ವಾಮಿ ಟ್ವೀಟ್

ಹಿಂದಿ ರಾಷ್ಟ್ರಭಾಷೆಯಲ್ಲ, ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದು ಬಂದಿದೆ. ಅದು ಈಗ ವಿಪರೀತಕ್ಕೆ ಹೋಗಿದೆ. ದೇಶದ ಇತರೆ ಭಾಷಿಗರು ಇಂತಹ ಪ್ರಯತ್ನಗಳ ವಿರುದ್ಧ ದಂಗೆ ಏಳುವುದಕ್ಕೂ ಮೊದಲು ಹಿಂದಿ ಹೇರಿಕೆ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಟ್ವೀಟ್

ಹಿಂದಿ ಹೇರಿಕೆಗೆ ಕಲಿಕೆ ನೆಪ ನೀಡಲಾಗುತ್ತಿದೆ. ಕಲಿಕೆ ಎಂದಿಗೂ ಆಯ್ಕೆಯೇ ಹೊರತು ಹೇರಿಕೆಯಿಂದ ಕಲಿಕೆಯಾಗಲು ಸಾಧ್ಯವಿಲ್ಲ. ಭಾಷೆಯೊಂದರ ಹೇರಿಕೆಯು ಇನ್ನೊಂದು ಭಾಷೆಯ ಅಸ್ಮಿತೆಯನ್ನು ಪ್ರಶ್ನಿಸುವಂತಿರಬಾರದು. ಭಾಷೆಯ ಹೇರಿಕೆಯು ಮತ್ತೊಂದು ಭಾಷೆಯ ಅವಸಾನಕ್ಕೆ ದಾರಿಯಾಗಬಾರದು. ದೇಶದ ಸಂಸ್ಕೃತಿ, ವೈವಿಧ್ಯತೆ, ಸಮಗ್ರತೆಗೆ ಧಕ್ಕೆ ತರಬಾರದು ಎಂದಿದ್ದಾರೆ.

ಹಿಂದಿ ದಿವಸವನ್ನು ಆಚರಿಸುವುದೇ ಆದರೆ ಹಿಂದಿಯೊಂದಿಗೆ ಅಧಿಕೃತ ಭಾಷೆಗಳೆನಿಸಿರುವ ಕನ್ನಡವೂ ಸೇರಿದಂತೆ ಎಲ್ಲಾ ಭಾಷೆಗಳ ದಿನವನ್ನು ಕೇಂದ್ರ ಸರ್ಕಾರವೇ ದೇಶದಾದ್ಯಂತ ಆಚರಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ದಿನವನ್ನು ಘೋಷಣೆ ಮಾಡಬೇಕು. ನವೆಂಬರ್‌ 1ಅನ್ನು ದೇಶದಾದ್ಯಂತ ಕನ್ನಡ ದಿನವಾಗಿ ಆಚರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕುಮಾರಸ್ವಾಮಿ ಟ್ವೀಟ್

ಕೇಂದ್ರದ ಆಡಳಿತದಲ್ಲಿ ಹಿಂದಿ ಜಾರಿಗೆ ಬಂದಿದ್ದಕ್ಕಾಗಿ, ಹಿಂದಿ ಜಾರಿ ಹೋರಾಟ ಮಾಡಿದ ಬೋಹರ್‌ ರಾಜೇಂದ್ರ ಸಿಂಹ ಜನ್ಮದಿನದ ನೆನಪಿಗಾಗಿ ಸೆ. 14ರಂದು ಹಿಂದಿ ದಿವಸ ಆಚರಿಸಲಾಗುತ್ತಿದೆ. ರಾಜೇಂದ್ರ ಸಿಂಹ ಹುಟ್ಟುಹಬ್ಬದಲ್ಲಿ ಹಿಂದಿ ಆಡಳಿತ ಭಾಷೆ ಆಗಿದ್ದರಲ್ಲಿ ಹಿಂದಿಯೇತರರು ಸಂಭ್ರಮಿಸುವುದು ಏನಿದೆ?, ಹಿಂದಿ ದಿವಸ್ ರದ್ದಾಗಬೇಕು ಎಂದು ಹೆಚ್​​​ಡಿಕೆ ಒತ್ತಾಯಿಸಿದ್ದಾರೆ.

ಸಂವಿಧಾನದ ಪರಿಚ್ಛೇದ 343, 344, 345ರಲ್ಲಿ ಹಿಂದಿಗೆ ಉತ್ತೇಜನ ನೀಡುವ ಗೊಂದಲಕಾರಿ ಅಂಶಗಳಿವೆ. ಇದೇ ಗುರಾಣಿ ಹಿಡಿದು ಹಿಂದಿ ಹೇರಿಕೆ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸಂವಿಧಾನವನ್ನು ಬದಲಿಸುತ್ತಾ ಬಂದಿರುವ ಬಿಜೆಪಿಗರು, ಒಂದೊಳ್ಳೆ ಕಾರಣಕ್ಕಾಗಿ ಇದನ್ನು ಬದಲಿಸಲಿ. ಈ ಮೂಲಕ ಕನ್ನಡವೂ ಸೇರಿ ಅನ್ಯಭಾಷೆಗಳ ಅಸ್ಮಿತೆಯನ್ನು ರಕ್ಷಿಸಲಿ ಎಂದು ಹೇಳಿದ್ದಾರೆ.

ಹಿಂದಿ ದಿವಸದಂತೆ ತ್ರಿಭಾಷಾ ಸೂತ್ರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯೂ ಹಿಂದಿ ಹೇರಿಕೆಯ ಮಾರ್ಗವೇ. ದ್ವಿಭಾಷಾ ಸೂತ್ರವೇ ಇದ್ದರೆ ನಷ್ಟವೇನು?, ಹಿಂದಿ ಮಾತನಾಡುವ ಯಾವ ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿಯಲ್ಲಿದೆ?. ಹಾಗಿದ್ದ ಮೇಲೆ ಹಿಂದಿಯೇತರ ರಾಜ್ಯಗಳಿಗೆ ಮಾತ್ರ ಏಕೆ ತ್ರಿಭಾಷಾ ಸೂತ್ರ?, ಎನ್‌ಇಪಿಯನ್ನು ರಾಜ್ಯ ಸರ್ಕಾರ ಒಪ್ಪಬಾರದು. ಇತ್ತೀಚೆಗೆ ಹಿಂದಿಯನ್ನು ಸಿದ್ಧಾಂತದ ವಿಚಾರವಾಗಿ ಪರಿವರ್ತಿಸಲಾಗಿದೆ. ರಾಷ್ಟ್ರೀಯತೆ, ದೇಶಭಕ್ತಿ, ಹಿಂದುತ್ವದೊಂದಿಗೆ ಹಿಂದಿಯನ್ನು ಸಮೀಕರಿಸಲಾಗಿದೆ. ಇಂತಹ ಪ್ರಯತ್ನಗಳಿಗಿಂತಲೂ ದೊಡ್ಡ ದೇಶದ್ರೋಹ ಇನ್ನೊಂದಿಲ್ಲ. ವಿವಿಧ ಭಾಷೆಗಳನ್ನು ಆಡುವ ಭಾರತೀಯರ ದೇಶಭಕ್ತಿಯನ್ನು ಭಾಷೆ ಮೂಲಕ ಅಳೆಯುವುದು ಅಪಚಾರವೇ ಸರಿ. ಇದು ಸಮಗ್ರತೆಗೆ ಎಸೆದ ಸವಾಲು ಎಂದಿದ್ದಾರೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಹಿಂದಿಯನ್ನು ಸುಲಭವಾಗಿ ಹೇರಬಹುದು ಎಂದು ಹಿಂದಿ ಶ್ರೇಷ್ಠತೆ ವ್ಯಸನಿಗಳು ಅಂದಾಜಿಸಿದ್ದಾರೆ. ಇದಕ್ಕೆ ರಾಜ್ಯ ಬಿಜೆಪಿ ನಾಯಕರ ನಡತೆಯೂ ಕಾರಣವಿರಬಹುದು. ಕನ್ನಡಿಗರದ್ದು ಸೌಹಾರ್ದ ಗುಣ. ಅದನ್ನು ದೌರ್ಬಲ್ಯ ಎಂದೆಣಿಸುವುದು ಬೇಡ. ಕನ್ನಡಿಗರ ಐತಿಹಾಸಿಕವಾದ ಮತ್ತೊಂದು ಗುಣ ಸಿಡಿದರೆ ಎಲ್ಲರೂ ತರಗೆಲೆಗಳೇ. ಕಾವೇರಿಯಿಂದ ಗೋದಾವರಿವರೆಗೆ ಆಳಿದ, ರಾಜ್ಯ ವಿಸ್ತರಣೆ ಮಾಡಿದ್ದ ಕನ್ನಡಿಗರಲ್ಲಿ ಶೌರ್ಯ, ಸ್ವಾಭಿಮಾನ ರಕ್ತಗತ. ಹಿಂದಿಯನ್ನು ಬಲವಂತವಾಗಿ ಹೇರುವ ಪ್ರಯತ್ನಗಳ ವಿರುದ್ಧ ಕನ್ನಡಿಗರು ಎದ್ದು ನಿಂತರೆ ಹಿಂದಿ ಹೇರಲು ಬರುವವರ ಕುತಂತ್ರ ಅಡಗಲಿದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ABOUT THE AUTHOR

...view details