ಬೆಂಗಳೂರು: ರಾಜ್ಯದ ಆರೋಗ್ಯ ಕ್ಷೇತ್ರವನ್ನು ಬಲಪಡಿಸಲು ಒಟ್ಟು 1,763 ವೈದ್ಯರು ಹಾಗೂ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್, ಬ್ಲ್ಯಾಕ್ ಫಂಗಸ್ ಸ್ಥಿತಿಗತಿ ಕುರಿತು ಸಭೆ ನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, 1,763 ವೈದ್ಯರನ್ನು ನೇರ ನೇಮಕಾತಿ ಮಾಡುವ ಪ್ರಕ್ರಿಯೆ ಮುಗಿದು ಅಧಿಸೂಚನೆ ಹೊರಡಿಸಲಾಗಿದೆ.
715 ತಜ್ಞರು, 75 ಜನರಲ್ ಮೆಡಿಸಿನ್, 57 ಜನರಲ್ ಸರ್ಜನ್, 145 ಗೈನಕಾಲಜಿಸ್ಟ್, 40 ಇಎನ್ ಟಿ, 35 ಚರ್ಮರೋಗ ತಜ್ಞರು, 142 ಅರವಳಿಕೆ ತಜ್ಞರು, 153 ಮಕ್ಕಳ ತಜ್ಞರು, 17 ರೇಡಿಯಾಲಜಿಸ್ಟ್ ಗಳನ್ನು ನೇಮಿಸಲಾಗುತ್ತಿದೆ. ಜೊತೆಗೆ 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಇದರಿಂದಾಗಿ ಆರೋಗ್ಯ ವ್ಯವಸ್ಥೆ ಬಲವಾಗಲಿದೆ.
ಗದಗ, ಹುಬ್ಬಳ್ಳಿ, ಬೆಳಗಾವಿ, ರಾಯಚೂರು ಮೊದಲಾದ ಜಿಲ್ಲೆಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ ಅಲ್ಲಿಗೆ ನೇಮಿಸಬೇಕೆಂದು ಸೂಚಿಸಲಾಗಿದೆ. ಶೀಘ್ರದಲ್ಲಿ ಸ್ಥಳ ನಿಯೋಜನೆ ಮಾಡಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಡಾ.ಕೆ.ಸುಧಾಕರ್ ಖಡಕ್ ವಾರ್ನಿಂಗ್ 1,200 ಟನ್ ಹಂಚಿಕೆ :
ರಾಜ್ಯಕ್ಕೆ 230 ಟನ್ ನಿಂದ ಆರಂಭಿಸಿ 1,015 ಟನ್ ಆಕ್ಸಿಜನ್ ಅನ್ನು ಕೇಂದ್ರ ಸರ್ಕಾರ ಹಂಚಿಕೆ ಮಾಡಿದೆ. ಈಗ ಮತ್ತಷ್ಟು ಏರಿಕೆ ಮಾಡಿ 1,200 ಟನ್ ಆಕ್ಸಿಜನ್ ಹಂಚಿಕೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರದ ಸಚಿವರಿಗೆ, ಪ್ರಧಾನಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಎಲ್ಲ ಕೋವಿಡ್ ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತಿದೆ. ಇದರಿಂದ ಸಂಬಂಧಿಕರು ಆರೈಕೆ ಹೇಗಾಗುತ್ತಿದೆ ಎಂದು ನೋಡಬಹುದು, ಹೊರಗಿನಿಂದ ಬರುವುದನ್ನು ತಪ್ಪಿಸುವುದರಿಂದ ಬ್ಲ್ಯಾಕ್ ಫಂಗಸ್ ನಿಯಂತ್ರಿಸಬಹುದು, ವೈದ್ಯರು ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬಹುದು. ಪ್ರತಿ ಜಿಲ್ಲೆಯ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಒಂದೇ ಕಡೆ ವೀಕ್ಷಿಸುವ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಆರೋಗ್ಯ ಸಹಾಯಕರಿಗೆ ಅಧಿಕಾರಿಗಳು ಎಂದು ಪದನಾಮ ಬದಲಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ವೈದ್ಯರಿಗೆ 10 ಸಾವಿರ ರೂ., ನರ್ಸಿಂಗ್ ಸಿಬ್ಬಂದಿಗೆ 8 ಸಾವಿರ ರೂ., ಗ್ರೂಪ್ ಡಿ ಸಿಬ್ಬಂದಿಗೆ 10 ಸಾವಿರ ರೂ. ರಿಸ್ಕ್ ಭತ್ಯೆಯನ್ನು ಏಪ್ರಿಲ್ 1 ರಿಂದ ನೀಡಲು ಆದೇಶಿಸಲಾಗಿದೆ. ಆಶಾ ಕಾರ್ಯಕರ್ತರಿಗೆ ಪ್ರತಿ ತಿಂಗಳ ಮೊದಲ ವಾರದಲ್ಲೇ ವೇತನ ಪಾವತಿಸುವ ವ್ಯವಸ್ಥೆ ತರಲಾಗಿದೆ. 17 ಜಿಲ್ಲೆಗಳಲ್ಲಿ ವೇತನ ಸಂಪೂರ್ಣ ಸಿಕ್ಕಿದೆ. ಎರಡು ದಿನಗಳಲ್ಲಿ ಉಳಿದೆಡೆ ವೇತನ ಕೈ ಸೇರಲಿದೆ ಎಂದು ಸ್ಪಷ್ಟಪಡಿಸಿದರು.
ಬ್ಲ್ಯಾಕ್ ಫಂಗಸ್ :
ಈವರೆಗೆ ರಾಜ್ಯದಲ್ಲಿ 446 ಜನರು ಬ್ಲ್ಯಾಕ್ ಫಂಗಸ್ ಸೋಂಕಿಗೆ ಒಳಗಾಗಿದ್ದಾರೆ. 433 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 11 ಮಂದಿ ಮನೆಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸಲು ಸೂಚಿಸಲಾಗಿದೆ. 12 ರೋಗಿಗಳು ಮೃತಪಟ್ಟಿದ್ದಾರೆ. ಈ ಸೋಂಕು ನಿವಾರಣೆಗೆ 1 ಸಾವಿರ ಔಷಧ ವೈಯಲ್ ಗಳು ಕೇಂದ್ರದಿಂದ ಸಿಗಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 555 ಬೇಸಿಕ್ ಆಂಬ್ಯುಲೆನ್ಸ್, 157 ಅಡ್ವಾನ್ಸ್ಡ್ ಆಂಬ್ಯುಲೆನ್ಸ್ ಇದೆ. 530 ವೆಂಟಿಲೇಟರ್ ಕೇಂದ್ರದಿಂದ ಬಂದಿದ್ದು, ಇದನ್ನು ಆಂಬ್ಯುಲೆನ್ಸ್ ಗೆ ಅಳವಡಿಸಲಾಗುವುದು. ಇದರಿಂದ ಎಲ್ಲಾ ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಕೋವಿಡ್ ಮರಣ ಪ್ರಮಾಣ ಕಡಿಮೆ ಮಾಡಲು ಪ್ರತಿ ಜಿಲ್ಲೆಯಲ್ಲಿ ಟೆಲಿ ಐಸಿಯುನಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಚರ್ಚಿಸಲಾಗಿದೆ ಎಂದು ವಿವರಿಸಿದರು.
ಕೇಂದ್ರದಿಂದ ರಾಜ್ಯಕ್ಕೆ 1.05 ಕೋಟಿ ಡೋಸ್ ಕೋವಿಶೀಲ್ಡ್ ಬಂದಿದ್ದು, 13.54 ಲಕ್ಷ ನೇರ ಖರೀದಿ ಮಾಡಲಾಗಿದೆ. 13.10 ಲಕ್ಷ ಡೋಸ್ ಕೋವ್ಯಾಕ್ಸಿನ್ ನೇರ ಖರೀದಿ ಮಾಡಲಾಗಿದೆ. ಈವರೆಗೆ 1.22 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಸದ್ಯ 11.46 ಲಕ್ಷ ಡೋಸ್ ದಾಸ್ತಾನು ಇದೆ. ಪ್ರಾಶಸ್ತ್ಯದಲ್ಲಿ ಗುಂಪುಗಳನ್ನು ಮಾಡಿಕೊಂಡು ಲಸಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
ಸೇವೆಯಲ್ಲಿದ್ದ ಹೆಣ್ಣುಮಗಳ ಮೇಲೆ ಹಲ್ಲೆ ಖಂಡನೀಯ :
ಆರೋಗ್ಯ ಸಿಬ್ಬಂದಿ ತಮ್ಮ ಪ್ರಾಣ ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಆರೋಗ್ಯ ಸಿಬ್ಬಂದಿ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡಿದರೆ 5 ವರ್ಷಗಳ ಸೆರೆವಾಸ ಅನುಭವಿಸಬೇಕಾಗುತ್ತದೆ. ಇದನ್ನು ಸರ್ಕಾರ ಸಹಿಸುವುದಿಲ್ಲ. ಸರ್ಕಾರ ಗಂಭೀರ ಕ್ರಮ ಕೈಗೊಳ್ಳುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.