ಕರ್ನಾಟಕ

karnataka

ETV Bharat / headlines

ಲಸಿಕೆ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ: ಪ್ರಧಾನಿ ಘೋಷಣೆಗೆ ಮುಖ್ಯಮಂತ್ರಿ ಸ್ವಾಗತ

ಜೂನ್ 21 ರಿಂದ ಕೋವಿಡ್ 19 ಲಸಿಕೆ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಕ್ರಮದಿಂದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುವುದು ಹಾಗೂ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

B S yadiyurappa
B S yadiyurappa

By

Published : Jun 7, 2021, 7:19 PM IST

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಇಂದು ಮಾತನಾಡಿದ್ದು, ಜೂನ್ 21 ರಿಂದ ಕೋವಿಡ್ 19 ಲಸಿಕೆ ಉಚಿತವಾಗಿ ಕೇಂದ್ರೀಕೃತ ವಿತರಣೆಯನ್ನು ಮತ್ತೆ ಆರಂಭಿಸುವುದಾಗಿ ಹೇಳಿದ್ದಾರೆ. ಈ ಹೇಳಿಕೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ.

ಕೇಂದ್ರ ಸರ್ಕಾರವು ದೇಶದಲ್ಲಿ ಉತ್ಪಾದನೆಯಾಗುವ ಶೇ. 75ರಷ್ಟು ಲಸಿಕೆಯನ್ನು ವಿತರಿಸುವುದರಿಂದ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲು ಸೇವಾ ಶುಲ್ಕ 150 ರೂ.ಗಳಿಗೆ ನಿಗದಿ ಪಡಿಸಿರುವುದರಿಂದ ಲಸಿಕೆ ಅಭಿಯಾನ ಇನ್ನಷ್ಟು ಸುಗಮವಾಗಿ ಮುಂದುವರಿಯಲಿದೆ. ಈ ಕ್ರಮದಿಂದ ಲಸಿಕೆ ಅಭಿಯಾನವನ್ನು ಇನ್ನಷ್ಟು ಬಲಪಡಿಸಲು ಸಾಧ್ಯವಾಗುವುದು ಹಾಗೂ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವಪೂರ್ಣ ಹೆಜ್ಜೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಹೇಳಿಕೆ ಮೂಲಕ ಅಭಿಪ್ರಾಯಪಟ್ಟಿದ್ದಾರೆ.

ಇದರೊಂದಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಣೆಯನ್ನು ದೀಪಾವಳಿ ಹಬ್ಬದವರೆಗೆ ವಿಸ್ತರಿಸಿರುವುದನ್ನು ಶ್ಲಾಘಿಸಿರುವ ಮುಖ್ಯಮಂತ್ರಿಯವರು, ಈ ಕ್ರಮವು ಕೋವಿಡ್ 19ರ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರನ್ನು ಹಸಿವಿನ ದವಡೆಯಿಂದ ಪಾರು ಮಾಡುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಉಚಿತ ಲಸಿಕೆ ವಿತರಣೆ ಘೋಷಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಕೂಡ ಸ್ವಾಗತಿಸಿದ್ದು, ಇದಕ್ಕಾಗಿ ರಾಜ್ಯದ ಜನರ ಪರವಾಗಿ ಪ್ರಧಾನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನವೆಂಬರ್ ತಿಂಗಳವರೆಗೆ ದೇಶದ 80 ಕೋಟಿ ಜನರಿಗೆ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಉಚಿತ ಪಡಿತರ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿಯವರ ಈ ನಿರ್ಧಾರಗಳು ಸಂಕಷ್ಟದಲ್ಲಿರುವ ಜನರಿಗೆ ವರದಾನ ಎನಿಸಲಿವೆ. ಜನಪರ ಪ್ರಧಾನಿ ಎಂಬುದನ್ನು ನರೇಂದ್ರ ಮೋದಿ ಈ ಮೂಲಕ ಸಾಬೀತುಪಡಿಸಿದ್ದಾರೆ. ಇದರಿಂದ ಪ್ರಧಾನಿಯವರ ಮೇಲೆ ಜನರ ವಿಶ್ವಾಸ ಇನ್ನಷ್ಟು ಹೆಚ್ಚಲಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಲಸಿಕೆ ಉತ್ಪಾದನೆ ಮತ್ತಷ್ಟು ಹೆಚ್ಚಾಗಲಿದೆ. ದೇಶದಲ್ಲಿ 7 ಕಂಪನಿಗಳು ಲಸಿಕೆಯನ್ನು ಉತ್ಪಾದಿಸುತ್ತಿವೆ. ಇನ್ನೂ ಮೂರು ಕಂಪನಿಗಳು ಪ್ರಯೋಗದ ಹಂತದಲ್ಲಿವೆ. ಎರಡು ಲಸಿಕೆಗಳ ಪ್ರಯೋಗ ಬಹಳ ವೇಗವಾಗಿ ನಡೆಯುತ್ತಿದೆ. ನೇಸಲ್ ವ್ಯಾಕ್ಸಿನ್ ಪ್ರಯೋಗ ನಡೆಯುತ್ತಿದೆ. ಭಾರತದ ಲಸಿಕಾ ಅಭಿಯಾನಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದು, ಇದು ಅವರ ಕರ್ತವ್ಯಪರತೆಗೆ ಸಾಕ್ಷಿಯಂತಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ABOUT THE AUTHOR

...view details