ಇಂದು ದ್ವಿತೀಯ ಪಿಯು ಪೂರಕ ಫಲಿತಾಂಶ ಪ್ರಕಟಗೊಂಡಿದೆ. ಪಿಯುಸಿ ಬಳಿಕ ಅನೇಕರನ್ನು ಕಾಡುವ ಪ್ರಶ್ನೆ ಮುಂದೇನು? ಎಂಬುದು. ಪೂರಕ ಫಲಿತಾಂಶದ ಬಳಿಕ ತಮಗೆ ಆಯ್ಕೆಗಳು ಸೀಮಿತ ಎಂಬ ಕಲ್ಪನೆ ಹಲವರದ್ದು. ಆದರೆ, ವೃತ್ತಿಪರ ಕೋರ್ಸ್ಗಳ ಅವಕಾಶ ಯಥೇಚ್ಛವಾಗಿದ್ದು, ಉತ್ತಮ ವೇತನ ಲಭ್ಯವಾಗುವ ಕೋರ್ಸ್ಗಳ ಲಭ್ಯತೆ ಬಗ್ಗೆ ಅರಿವು ಹೊಂದಿರಬೇಕು. ಅದರಲ್ಲೂ ಇಂದಿನ ತಂತ್ರಜ್ಞಾನ ಯುಗದಲ್ಲಿ ಕಾರ್ಪೋರೇಟ್ ಜಗತ್ತು ಆಳುವ ಅನೇಕ ಹುದ್ದೆಗಳಿಗೆ ಈ ಕೋರ್ಸ್ಗಳ ಮೂಲಕ ತಯಾರಿ ನಡೆಸಬಹುದು. ನಿರ್ದಿಷ್ಟ ವೃತ್ತಿಯ ಕುರಿತು ನಿಮಗೆ ಪ್ಯಾಷನ್ ಇದ್ದಾಗ ಅದಕ್ಕೆ ಸಂಬಂಧಿಸಿದ ಕೋರ್ಸ್ಗಳನ್ನು ಪದವಿ ಹಂತದಲ್ಲೇ ಮುಗಿಸಬಹುದು. ಅಂತಹ ಕೆಲವು ಉದ್ಯೋಗ ಸಂಬಂಧಿ ಸಲಹೆಗಳು ಇಲ್ಲಿವೆ.
ಕಮರ್ಷಿಯಲ್ ಪೈಲಟ್, ಗಗನಸಖಿ: ಅನೇಕರಿಗೆ ಹಕ್ಕಿಯಂತೆ ಹಾರುವ ಕನಸಿರುತ್ತದೆ. ಇಂತಹ ಕನಸಿಗೆ ವೇದಿಕೆಯಾಗುತ್ತದೆ ಈ ಕೋರ್ಸ್. ಅನೇಕ ಖಾಸಗಿ ಸಂಸ್ಥೆಗಳು ಕಮರ್ಷಿಯಲ್ ಪೈಲಟ್ ಕೋರ್ಸ್ಗಳ ತರಬೇತಿ ನಡೆಸುತ್ತಿವೆ. ಇನ್ನು ಗಗನಸಖಿ ಕೋರ್ಸ್ಗಳು ಕೂಡ ಸಾಕಷ್ಟು ಬೇಡಿಕೆಯ ಉದ್ಯಮವಾಗಿ ಇಂದು ರೂಪುಗೊಂಡಿದೆ. ಅನೇಕ ವಿಮಾನಯಾನ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿರುವ ತರಬೇತಿ ಸಂಸ್ಥೆಗಳು ಕೂಡ ಇದ್ದು, ಇವುಗಳನ್ನು ಆಯ್ಕೆ ಮಾಡಬಹುದು.
ಪ್ರವಾಸೋದ್ಯಮ ಮತ್ತು ಆತಿಥ್ಯ: ಬಿವೊಕ್ ಎಂದು ಗುರುತಿಸಿಕೊಂಡಿರುವ ಈ ಕೋರ್ಸ್ ಕೂಡ ಇಂದು ಸಾಕಷ್ಟು ಮನ್ನಣೆಗಳಿಸಿದೆ. ಪಿಯುಸಿಯಲ್ಲಿ ಶೇ 45ರಿಂದ 50ರಷ್ಟು ಫಲಿತಾಂಶ ಬಂದಿದ್ದರೂ ಈ ಕೋರ್ಸ್ಗೆ ಸೇರಬಹುದು. ಅನೇಕ ವಿಶ್ವವಿದ್ಯಾಲಯಗಳು ಈ ಸಂಬಂಧ ಈಗಾಗಲೇ ಅನೇಕ ಕೋರ್ಸ್ಗಳನ್ನು ಕಾಲೇಜಿನಲ್ಲಿ ಅಳವಡಿಸಿದೆ. ಹೆಚ್ಚಿನ ವೇತನ ಜೊತೆಗೆ ಸುತ್ತಾಟ, ಜನರೊಂದಿಗೆ ಸಂವಹನ, ಹೊಸ ತಾಣಗಳ ಆವಿಷ್ಕಾರಗಳನ್ನು ಇದರಲ್ಲಿ ಮಾಡಬಹುದು.
ಕಂಟೆಂಟ್ ಕ್ರಿಯೇಟರ್: ಇಂದು ಸಾಮಾಜಿಕ ಜಾಲತಾಣ ಜನರನ್ನು ಆಳುತ್ತಿದೆ. ಜನರ ಅಭಿರುಚಿಗೆ ತಕ್ಕಂತೆ ವಿಡಿಯೋಗಳನ್ನು ರೂಪಿಸುವ ಕೌಶಲ್ಯ ನಿಮಗಿದ್ದರೆ, ಜಾಹೀರಾತು ವಿಭಾಗ ಅಥವಾ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸಬಹುದು. ಪದವಿ ಹಂತದಲ್ಲಿ ಸಮೂಹ ಸಂವಹನ ಕೋರ್ಸ್ಗಳನ್ನು ಆಯ್ಕೆ ಮಾಡಬಹುದು.