ಬೆಂಗಳೂರು: ಮಹಾಮಾರಿ ಕೋವಿಡ್ಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೀಗೆ ಸಾವನ್ನಪ್ಪಿದವರ ಕುಟುಂಬ ಸದಸ್ಯರು ನ್ಯಾಯಾಲಯದ ಮೂಲಕ ಪರಿಹಾರ ಪಡೆದುಕೊಳ್ಳಬಹುದು ಎನ್ನುತ್ತಾರೆ ಕಾನೂನು ತಜ್ಞರು.
ಕಳೆದೊಂದು ವರ್ಷದಿಂದ ಹರಡುತ್ತಿರುವ ಕೋವಿಡ್ ಸೋಂಕಿನಿಂದ ಪಾರಾಗಲು ಜನ ಹರಸಾಹಸಪಡುತ್ತಿದ್ದಾರೆ. ಇದೀಗ ಎದುರಾಗಿರುವ ಕೋವಿಡ್ 2ನೇ ಅಲೆ ಅತ್ಯಂತ ಗಂಭೀರ ಸ್ವರೂಪದಿಂದ ಕೂಡಿದ್ದು, ಸಾವಿನ ಸಂಖ್ಯೆ ಮಿತಿ ಮೀರಿದೆ. ಸ್ಥಿತಿವಂತರು ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತಲೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಪಡೆದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗೆ ಚಿಕಿತ್ಸೆ ಪಡೆದುಕೊಂಡ ನಂತರವೂ ಕೆಲವರು ಸಾವಿನಿಂದ ಬಚಾವಾಗಲು ಸಾಧ್ಯವಾಗುತ್ತಿಲ್ಲ. ಆದರೆ, ಮಧ್ಯಮ, ಕೆಳ ಮಧ್ಯಮ ಹಾಗೂ ಬಡವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದಲಿಗೆ ಸರ್ಕಾರ ಚಿಕಿತ್ಸೆ ನೀಡುವವರೆಗೆ ಕಾಯಬೇಕಾಗಿದೆ.
ಸರ್ಕಾರದಿಂದ ಸಿಗದ ಚಿಕಿತ್ಸೆ:
ಕೋವಿಡ್ನಿಂದ ಪಾರಾಗಲು ಶ್ರೀಮಂತರು ಅಗತ್ಯಕ್ಕಿಂತ ಹೆಚ್ಚಾಗಿ ರೆಮ್ಡೆಸಿವಿರ್ ಖರೀದಿಸಿ ಇಟ್ಟುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಪರ ವಕೀಲರೇ ಹೈಕೋರ್ಟ್ಗೆ ಹೇಳಿಕೆ ನೀಡಿದ್ದನ್ನು ಗಮನಿಸಿದರೆ ಇವರಿಗೆ ಚಿಕಿತ್ಸೆ ಪಡೆದುಕೊಳ್ಳಲು ಅಷ್ಟೇನೂ ಸಮಸ್ಯೆಯಾಗುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಕಾಳಸಂತೆಯಲ್ಲಿ ದುಬಾರಿ ರೆಮ್ಡೆಸಿವಿರ್ ಖರೀದಿಯೇ ಇವರಿಗೆ ಕಷ್ಟವಾಗದು ಎಂದರೆ, ಆ್ಯಕ್ಸಿಜನ್ ಸಾಂದ್ರಕಗಳ ಖರೀದಿ ಇವರಿಗೆ ದೊಡ್ಡದಲ್ಲ. ಪ್ರಸ್ತುತ ವಿಪತ್ತಿನ ಸಂದರ್ಭದಲ್ಲಿ ನಿಜಕ್ಕೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿರುವವರು, ಚಿಕಿತ್ಸೆಯೇ ಇಲ್ಲದೇ ಸಾವನ್ನಪ್ಪುತ್ತಿರುವವರು ಆರ್ಥಿಕ ಬಲಾಢ್ಯರಲ್ಲದ, ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಲಾಗದ ಬಡ ಸೋಂಕಿತರಷ್ಟೇ. ಇವರಿಗೆ ಖುದ್ದು ಸರ್ಕಾರವೇ ಚಿಕಿತ್ಸೆ ನೀಡಬೇಕು. ಆದರೆ, ಈಗಿರುವ ಎಲ್ಲ ಸ್ಥಿತಿಗಳನ್ನು ಗಮನಿಸಿದರೆ ಸರ್ಕಾರದಿಂದ ಎಲ್ಲರಿಗೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎಂಬುದು ಸ್ಪಷ್ಟ.
ಆರೋಗ್ಯದ ಹಕ್ಕು :
ಸರ್ಕಾರ ಚಿಕಿತ್ಸೆ ನೀಡದಿದ್ದರೆ ಬಡವರು ಸಾಯಬೇಕೇ ಎಂಬ ಪ್ರಶ್ನೆಗೆ ಕಾನೂನು ತಜ್ಞರು ಕೆಲ ಪರಿಹಾರಗಳನ್ನು ಸೂಚಿಸುತ್ತಾರೆ. ಸಂವಿಧಾನದ ವಿಧಿ 21 ಜೀವಿಸುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ಖಾತರಿಪಡಿಸುತ್ತದೆ. ಈ ಜೀವಿಸುವ ಹಕ್ಕಿನಲ್ಲಿ ಆರೋಗ್ಯದ ಹಕ್ಕು ಕೂಡ ಸೇರಿದೆ. ಈ ಹಕ್ಕು ದೇಶದ ನಾಗರೀಕರಿಗಷ್ಟೇ ಅಲ್ಲ, ದೇಶದ ಒಳಗಿರುವ ಪ್ರತಿಯೊಬ್ಬರಿಗೂ ಇದೆ ಎನ್ನುತ್ತಾರೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡರು. ಹೀಗಾಗಿ ಸೋಂಕಿತರು ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಕೋವಿಡ್ಗೆ ಚಿಕಿತ್ಸೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಆರೋಗ್ಯದ ಹಕ್ಕನ್ನು ಖಾತರಿಪಡಿಸುವುದು, ಅಗತ್ಯ ವೈದ್ಯಕೀಯ ಚಿಕಿತ್ಸೆಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ.
ಹೈಕೋರ್ಟ್ ಅಭಿಪ್ರಾಯ :
ಕೋವಿಡ್ ಮೊದಲ ಅಲೆ ಆರಂಭವಾಗುತ್ತಲೇ ಕೆಲ ಸಾಮಾಜಿಕ ಸಂಘಟನೆಗಳು, ವಕೀಲರು ಅಗತ್ಯ ಚಿಕಿತ್ಸೆ ನೀಡುವಂತೆ, ಕೋವಿಡ್ ಸೋಂಕು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ 10ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ. ಕೋರ್ಟ್ ಮಧ್ಯ ಪ್ರವೇಶದಿಂದಾಗಿ ಸೋಂಕಿತರಿಗೆ ಆಕ್ಸಿಜನ್, ಲಸಿಕೆ, ಔಷಧಗಳು ಲಭ್ಯವಾಗುವ ಪ್ರಮಾಣ ಹೆಚ್ಚಾಗುವ ಜತೆಗೆ ಬಡವರಿಗೆ, ನಿರ್ಗತಿಕರಿಗೆ ಆಹಾರ ಭದ್ರತೆಯೂ ಸಿಕ್ಕಿದೆ. ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ಮೂಲಭೂತ ಹಕ್ಕಿನ ಉಲ್ಲಂಘನೆ ಆಗಲಿದ್ದು, ಜನರು ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.