ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಕುರಿತಂತೆ ಇಂದು ಸಂಜೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಸಭೆ ನಡೆಸಲಿದ್ದು, ಮುಂದಿನ ಎರಡು ವಾರ ಲಾಕ್ಡೌನ್ ಮುಂದುವರೆಸುವುದು ಬಹುತೇಕ ಖಚಿತ ಎನ್ನಲಾಗಿದೆ.
ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ಕೋವಿಡ್ ನಿಯಂತ್ರಣ ಕಾರ್ಯಗಳ ಜವಾಬ್ದಾರಿ ಪಡೆದಿರುವ ಡಿಸಿಎಂ ಅಶ್ವತ್ಥ್ ನಾರಾಯಣ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಡಾ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದಾರೆ.
ಸಭೆಯ ಬಹುಮುಖ್ಯ ಉದ್ದೇಶ ರಾಜ್ಯದಲ್ಲಿ ಲಾಕ್ಡೌನ್ ಮುಂದುವರೆಸಬೇಕಾ? ಬೇಡವಾ? ಎಂಬುದು. ಒಂದು ವೇಳೆ ಮುಂದುವರೆಸಬೇಕು ಎನ್ನುವುದಾದರೆ ಎಷ್ಟು ದಿನ ಎನ್ನುವ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಸಿಎಂ ಯಡಿಯೂರಪ್ಪ, ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯ ಪಡೆಯಲಿದ್ದಾರೆ.