ಬೆಂಗಳೂರು:ಪ್ರವಾಹ ಪೀಡಿತ, ಮಳೆ ಹಾನಿ ಪ್ರದೇಶಗಳ ಮತದಾರರು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಆಡಳಿತಾರೂಢ ಬಿಜೆಪಿ ವಿರುದ್ಧ ಸಿಟ್ಟಾಗಿದ್ದಾರೆಯೇ...? ಹೀಗೊಂದು ಪ್ರಶ್ನೆ ಈಗ ಕಮಲ ಪಾಳಯದಲ್ಲಿ ಎದ್ದಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಳೆಹಾನಿ ಮತ್ತು ನೆರೆ ಪೀಡಿತ ಪ್ರದೇಶಗಳ ವ್ಯಾಪ್ತಿಯ 18 ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಎರಡು ಕ್ಷೇತ್ರ ಗೆದ್ದಿರುವುದು ರಾಜ್ಯ ಬಿಜೆಪಿಯಲ್ಲಿ ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಡಿಸೆಂಬರ್ 5 ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಪ್ರವಾಹ ಪೀಡಿತ ಮತ್ತು ಮಳೆಹಾನಿಗೊಳಗಾದ 6 ಕ್ಷೇತ್ರಗಳಿಗೆ ಸಹ ಮತದಾನ ನಡೆಯಲಿದೆ. ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಪ್ರವಾಹ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ನೆರವು ನೀಡದಿರುವುದರಿಂದ ಮಹಾರಾಷ್ಟ್ರದಂತೆ ರಾಜ್ಯದ ಮತದಾರರು ಸಹ ಸಿಟ್ಟಾಗಿ ಉಪ ಚುನಾವಣೆಯಲ್ಲಿ ಪಕ್ಷಕ್ಕೆ ಪಾಠ ಕಲಿಸಲಿದ್ದಾರೆಯೇ ಎನ್ನುವ ಭಯ ಬಿಜೆಪಿ ನಾಯಕರಲ್ಲಿ ಮೂಡಿದೆ.
ಮಹಾರಾಷ್ಟ್ರ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಅವಲೋಕಿಸಿದಾಗ ಬಿಜೆಪಿ ವಿರುದ್ಧ ಪ್ರವಾಹ ಪೀಡಿತ ಕ್ಷೇತ್ರದ ಮತದಾರರು ತಿರುಗಿಬಿದ್ದದ್ದಾರೆ ಎನ್ನುವುದು ಸ್ಪಷ್ಟವಾಗಿದೆ. ಏಕೆಂದರೆ ಪ್ರವಾಹಕ್ಕೀಡಾಗಿದ್ದ ಪ್ರದೇಶ ವ್ಯಾಪ್ತಿಯ 18 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಎರಡೇ ಕ್ಷೇತ್ರ ಗೆದ್ದಿದೆ. ಇದೇ ಕರ್ನಾಟಕದಲ್ಲಿ ನಡೆಯುವ ಉಪಚುನಾವಣೆಯಲ್ಲಿ 6 ಕ್ಷೇತ್ರಗಳು ಪ್ರವಾಹದಿಂದ ತತ್ತರಿಸಿವೆ. ಇಲ್ಲಿನ ಮತದಾರರು ಕೈಕೊಡುವರೆ ಎಂಬ ಆತಂಕ ಬಿಜೆಪಿ ಅಭ್ಯರ್ಥಿಗಳನ್ನು ಚಿಂತೆಗೀಡು ಮಾಡಿದೆ.