ಬೆಂಗಳೂರು:ಕೊರೊನಾ ಹಿನ್ನೆಲೆಯಲ್ಲಿ ವಿಳಂಬವಾಗಿರುವ ಮರಗಳ ಗಣತಿ ಕಾರ್ಯವನ್ನು ಚುರುಕುಗೊಳಿಸಿ ಎಂದು ಹೈಕೋರ್ಟ್, ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಕಡಿಯುತ್ತಿರುವ ಕ್ರಮ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಮರ ಗಣತಿ ಕಾರ್ಯ ಚುರುಕುಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ - High Court
ಅಭಿವೃದ್ಧಿ ಕಾಮಗಾರಿಗಳಿಗೆ ಮರಗಳನ್ನು ಕಡಿಯುತ್ತಿರುವ ಕ್ರಮ ಪ್ರಶ್ನಿಸಿ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಹಾಗೂ ಪರಿಸರವಾದಿ ದತ್ತಾತ್ರೇಯ ಟಿ. ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ನಡೆಯಿತು. ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಮರಗಳ ಗಣತಿ ಕಾರ್ಯವನ್ನು ಚುರುಕುಗೊಳಿಸಿ ಎಂದು ಆದೇಶ ನೀಡಿದೆ.
![ಮರ ಗಣತಿ ಕಾರ್ಯ ಚುರುಕುಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶನ High Court](https://etvbharatimages.akamaized.net/etvbharat/prod-images/768-512-04:14:36:1623494676-kn-bng-02-hc-tree-7208962-12062021160818-1206f-1623494298-485.jpeg)
ಅರ್ಜಿ ವಿಚಾರಣೆ ವೇಳೆ ಬಿಬಿಎಂಪಿ ಸಲ್ಲಿಸಿದ ಮರಗಳ ಗಣತಿ ಕುರಿತ ಪ್ರಮಾಣಪತ್ರ ಪರಿಶೀಲಿಸಿದ ಪೀಠ, ಬೆಂಗಳೂರು ನಗರ ಜಿಲ್ಲೆಯಲ್ಲಿ 61,967 ಮರಗಳು ಮತ್ತು ಬಿಬಿಎಂಪಿ ವ್ಯಾಪ್ತಿಯಲ್ಲಿ 18,144 ಮರಗಳ ಗಣತಿ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಹಲವು ದಶಕಗಳ ನಂತರ ಮರಗಣತಿ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಗಣತಿ ಕಾರ್ಯವನ್ನು ವಿಳಂಬ ಮಾಡದೇ ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದು ನಿರ್ದೇಶಿಸಿದೆ.
ಪಾಲಿಕೆ ಪರ ವಕೀಲರು, ಕೋವಿಡ್ ಹಿನ್ನೆಲೆಯಲ್ಲಿ ಮರಗಣತಿ ವಿಚಾರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿಲ್ಲ. ಸೋಂಕಿನ ತೀವ್ರತೆ ಇಳಿಮುಖವಾದ ನಂತರ ಪ್ರಕ್ರಿಯೆಗೆ ವೇಗ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಮಧ್ಯೆ, ಬಿಎಂಆರ್ ಸಿಎಲ್ ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ 58 ಮರಗಳ ಸ್ಥಳಾಂತರಕ್ಕೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ನಿಗಮ ಮತ್ತು ಗುತ್ತಿಗೆದಾರರ ನಡುವೆ ಆಗಿರುವ ಒಪ್ಪಂದದ ಪ್ರತಿ ಹಾಗೂ ಸ್ಥಳಾಂತರ ಮಾಡಲಿರುವ ಜಾಗಗಳ ವಿವರಗಳನ್ನು ಸಲ್ಲಿಸುವಂತೆ ಬಿಎಂಆರ್ ಸಿಎಲ್ ಗೆ ನಿರ್ದೇಶನ ನೀಡಿದೆ.