ದೊಡ್ಡಬಳ್ಳಾಪುರ: ಸಿಆರ್ಪಿಎಫ್ ಯೋಧರಾಗಿರುವ ಇವರು ಕೋಬ್ರಾ ತರಬೇತಿ ಪಡೆದು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದಾರೆ, ರಜೆಯಲ್ಲಿ ಊರಿಗೆ ಬಂದಾಗ ಸೇನೆಗೆ ಸೇರುವ ಹುಡುಗರಿಗೆ ತರಬೇತಿಯನ್ನು ನೀಡುವ ಮೂಲಕ ಮುಂದಿನ ಪೀಳಿಗೆಗೆ ಯೋದರನ್ನು ಹುಟ್ಟುಹಾಕುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯ ಸಾಮಾನ್ಯ ರೈತಾಪಿ ಕುಟುಂಬ ದ ಹುಡುಗ ಅನಂತ್ ರಾಜ್ ಗೋಪಾಲ್ ಈ ಕಾರ್ಯ ಮಾಡುತ್ತಿರುವವರು. ಸದ್ಯ ಇವರು ಛತೀಸ್ ಘಡದ ನಕ್ಸಲ್ ಪೀಡಿತ ಪ್ರದೇಶದಲ್ಲಿ ಯೋಧನಾಗಿ ದೇಶ ಸೇವೆ ಮಾಡುತ್ತಿದ್ದಾರೆ.
1999 ರಲ್ಲಿ ನಡೆದ ಕಾರ್ಗಿಲ್ ಯುದ್ಧ ಮತ್ತು ತಮ್ಮ ಗ್ರಾಮದ ರಾಘವೇಂದ್ರ ಎಂಬುವರು ಸೈನಿಕನಾಗಿ ದೇಶ ಸೇವೆ ಮಾಡುತ್ತಿದ್ದು, ಇವರಿಗೆ ಭಾರತೀಯ ಸೇನೆಗೆ ಸೇರಲು ಪ್ರೇರಣೆಯಾಯಿತಂತೆ. ತಮ್ಮ 19 ನೇ ವಯಸ್ಸಿನಲ್ಲಿ ಸಿಆರ್ ಪಿಎಫ್ ಗೆ ಸೈನಿಕನಾಗಿ ಆಯ್ಕೆ ಯಾದ ಇವರು, ಮೊದಲಿಗೆ ಹೈದರಾಬಾದ್ ನಲ್ಲಿ ತರಬೇತಿ ಪಡೆದ ಅವರು ಅನಂತರ ಕಾಶ್ಮೀರ, ಅಸ್ಸೋಂ, ಮಣಿಪುರದಲ್ಲಿ ಕೆಲಸ ಮಾಡಿದ್ದು, ಈಗ ಛತ್ತಿಸ್ ಘಡದಲ್ಲಿ ಕೆಲಸ ಮಾಡುತ್ತಿದ್ದಾರೆ.
ಕಮಾಂಡೋ ಬಟಾಲಿಯನ್ ಪಾರ್ ರೆಸಲ್ಯೂಟ್ ಆ್ಯಕ್ಶನ್ (ಕೋಬ್ರಾ) ತರಬೇತಿ ಪಡೆದಿರುವ ಅನಂತ್ , ನಕ್ಸಲ್ ಪೀಡಿತ ಪ್ರದೇಶ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ.