ಬೆಂಗಳೂರು:ಇಂದು ದಿ.ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನ. ಈ ವಿಶೇಷ ಸಂದರ್ಭದಲ್ಲಿ ಅವರ ಸಹೋದರ ಶಿವರಾಜ್ ಕುಮಾರ್ ಸೇರಿದಂತೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಸಾಮಾಜಿಕ ಮಾಧ್ಯಮದಲ್ಲಿ ಶುಭ ಕೋರಿ ಟ್ವೀಟ್ ಮಾಡಿದ್ದಾರೆ.
ನಿನ್ನ ಜೀವನವೇ ದಂತಕಥೆ: "ನೀನು ಹುಟ್ಟಿದಾಗ ನಮ್ಮ ಮನೆಯಲ್ಲಿ ಉಲ್ಲಾಸ ಉಕ್ಕಿ ಹರಿಯುತ್ತಿತ್ತು. ನಿನ್ನ ಕಣ್ಣಲ್ಲಿದ್ದ ಹೊಳಪು ನೀನು ಪವರ್ ಸ್ಟಾರ್ ಆಗೋದನ್ನು ಆಗಲೇ ಹೇಳ್ತಿತ್ತು. ನೀನು ನಕ್ಕರೆ ಎಲ್ಲರೂ ನಗ್ತಿದ್ರು. ನೀನು ಕುಣಿದರೆ ಎಲ್ಲರೂ ರೋಮಾಂಚನದಿಂದ ನೋಡ್ತಿದ್ರು. ಮನೆಗೆ ಬಂದ ಅತಿಥಿ ನೆಂಟರುಗಳಿಗೆಲ್ಲ ನೀನೇ ಬೇಕು. ಅಂತಹ ಪುಟ್ಟ ಅಪ್ಪು ಮಿಂಚಿನಂತೆ ತೆರೆ ಮೇಲೆ ಬಂದು, ಹೆಮ್ಮರವಾಗಿ, ಕೋಟ್ಯಂತರ ಜನರಿಗೆ ನೆರಳಾಗಿದ್ದನ್ನು ಹತ್ತಿರದಿಂದ ನೋಡಿದ ನಾನೇ ಪುನೀತ".
"ನಿನ್ನನ್ನು ಎತ್ತಿ ಆಡಿಸಿದ ಅಣ್ಣನಾಗಿ, ನಿನ್ನೊಂದಿಗೆ ಕೂಡಿ ಆಡಿದ ಸ್ನೇಹಿತನಾಗಿ, ನಿನ್ನ ಕೆಲಸಗಳನ್ನು ಮೆಚ್ಚಿ ಅಪ್ಪಿಕೊಂಡ ಕನ್ನಡಿಗನಾಗಿ, ಹಬ್ಬ ಯಾವುದೇ ಆಗಿದ್ರೂ ನಿನ್ನ ಹೆಸರಲ್ಲಿ ಪಟಾಕಿ ಹಚ್ಚಿ ಅಭಿಮಾನಿಗಳಲ್ಲಿ ಒಬ್ಬನಾಗಿ ಹೇಳ್ತಿದೀನಿ. ನೀನು ಹುಟ್ಟಿದ್ದೇ ಒಂದು ಉತ್ಸವ, ನೀನು ಬೆಳೆದಿದ್ದು ಇತಿಹಾಸ, ನಿನ್ನ ಜೀವನ ಒಂದು ದಂತಕಥೆ, ನಿನ್ನ ನೆನಪುಗಳು ಎಂದಿಗೂ ಅಮರ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು" ಎಂದು ಶಿವರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಅಪ್ಪು ಅಜರಾಮರ: "ಅತಿ ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಸಾಧನೆಗೈದು ಎಲ್ಲರಿಗೂ ಮಾದರಿಯಾಗಿರುವ ಪ್ರೀತಿಯ ಅಪ್ಪು, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಜನ್ಮಸ್ಮರಣೆಯಂದು ಗೌರವ ಪೂರ್ವಕ ನಮನಗಳು. ಅಪ್ಪು ಸದಾ ಅಜರಾಮರ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.