ಹೈದರಾಬಾದ್ : ಟಾಲಿವುಡ್ ನಟಿ ಡಿಂಪಲ್ ಹಯಾತಿ ಅವರ ಮನೆಯೊಳಗೆ ಓರ್ವ ಅಪರಿಚಿತ ಯುವಕ ಹಾಗೂ ಯುವತಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದು, ಮನೆಯವರಿಗೆ ಆತಂಕ ಸೃಷ್ಟಿಸಿದೆ. ಜುಬಿಲಿ ಹಿಲ್ಸ್ ಪೊಲೀಸರ ಪ್ರಕಾರ- ಡಿಂಪಲ್ ತನ್ನ ಸ್ನೇಹಿತ ವಿಕ್ಟರ್ ಡೇವಿಡ್ ಜೊತೆಗೆ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಎಸ್‌ಕೆಆರ್ ಎನ್‌ಕ್ಲೇವ್‌ನಲ್ಲಿ ನೆಲೆಸಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಟ್ರಾಫಿಕ್ ಡಿಸಿಪಿ ರಾಹುಲ್ ಹೆಗ್ಡೆ ಅವರೊಂದಿಗೆ ನಡೆದ ಪಾರ್ಕಿಂಗ್ ವಿವಾದದಲ್ಲಿ ಡಿಂಪಲ್ ಮತ್ತು ಡೇವಿಡ್ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಗೊತ್ತಾಗಿದೆ.
ಈ ನಡುವೆ ಗುರುವಾರ ಬೆಳಗ್ಗೆ ಅಪಾರ್ಟ್ ಮೆಂಟ್ ಪ್ರವೇಶಿಸಿದ ಯುವತಿ ಹಾಗೂ ಯುವಕ ಸಿ2 ಬ್ಲಾಕ್ನಲ್ಲಿರುವ ಡಿಂಪಲ್ ನಿವಾಸದೊಳಗೆ ಪ್ರವೇಶಿಸಿದ್ದರು. ಆಗ ಮನೆಗೆಲಸದವಳು ಬಂದವರು ಯಾರೆಂದು ವಿಚಾರಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಮನೆಯಲ್ಲಿದ್ದ ನಾಯಿ ಅಪರಿಚಿತರ ಬಳಿಗೆ ಬಂದಿದ್ದರಿಂದ ಅವರು ಗಾಬರಿಗೊಂಡು ಮರಳಿ ಲಿಫ್ಟ್‌ನೊಳಗೆ ಸೇರಿಕೊಂಡಿದ್ದಾರೆ. ಲಿಫ್ಟ್‌ನಲ್ಲಿ ಅವರೊಂದಿಗೆ ಹೋದ ನಾಯಿ ಅವರು ಹೊರಗೆ ಹೋದ ನಂತರ ಹಿಂತಿರುಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಡಿಂಪಲ್ ಹಂಡ್ರೆಡ್ ನಂಬರಿಗೆ ಕರೆ ಮಾಡಿ ಪೊಲೀರಿಗೆ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಜುಬ್ಲಿ ಹಿಲ್ಸ್ ಪೊಲೀಸರು ಯುವತಿ ಮತ್ತು ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿದಾಗ, ತಾವು ಆಂಧ್ರ ಪ್ರದೇಶದ ರಾಜಮಂಡ್ರಿಯಿಂದ ಬಂದ್ದದ್ದು, ತಾವು ಡಿಂಪಲ್ ಅವರ ಅಭಿಮಾನಿಗಳು ಎಂದು ಹೇಳಿದ್ದಾರೆ. ಇತ್ತೀಚಿನ ಡಿಸಿಪಿ ರಾಹುಲ್ ಹೆಗ್ಡೆ ಅವರೊಂದಿಗಿನ ವಿವಾದದ ಘಟನೆಯ ಹಿನ್ನೆಲೆಯಲ್ಲಿ ಡಿಂಪಲ್ ಅವರನ್ನು ಭೇಟಿಯಾಗಲು ಬಂದಿದ್ದಾಗಿ ಹೇಳಿದ್ದಾರೆ.