ತೆಲುಗಿನ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 7' ಭಾನುವಾರ ಮುಕ್ತಾಯಗೊಂಡಿದೆ. ರೈತನ ಮಗ ಪಲ್ಲವಿ ಪ್ರಶಾಂತ್ ಟ್ರೋಪಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 105 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ ಪ್ರಶಾಂತ್, ಬಿಗ್ ಬಾಸ್ ಟೈಟಲ್ ಗೆದ್ದ ಮೊದಲ 'ಕಾಮನ್ ಮ್ಯಾನ್' ಎಂಬ ದಾಖಲೆ ಬರೆದಿದ್ದಾರೆ. ಕಿರುತೆರೆ ನಟ ಅಮರ್ದೀಪ್ ರನ್ನರ್ ಅಪ್ ಆಗಿದ್ದಾರೆ. ಈ ಫಿನಾಲೆ ಕಾರ್ಯಕ್ರಮಕ್ಕೆ ಮಾಸ್ ಮಹಾರಾಜ ರವಿತೇಜ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು.
ಫಿನಾಲೆಯಲ್ಲಿ ಕಾರ್ಯಕ್ರಮದ ನಿರೂಪಕ ನಾಗಾರ್ಜುನ ಅಕ್ಕಿನೇನಿ ಅವರು ಪ್ರಶಾಂತ್ ಅವರನ್ನು ವಿಜೇತ ಎಂದು ಅಧಿಕೃತವಾಗಿ ಘೋಷಿಸಿದರು. ಗ್ರ್ಯಾಂಡ್ ಫಿನಾಲೆಯಲ್ಲಿ ಹಿರಿಯ ನಟ ಶಿವಾಜಿ, ಪಲ್ಲವಿ ಪ್ರಶಾಂತ್, ಪ್ರಿಯಾಂಕಾ, ಯವರ್, ಅರ್ಜುನ್ ಮತ್ತು ಅಮರ್ದೀಪ್ ಟಾಪ್ 6ನಲ್ಲಿ ಇದ್ದರು. ಇವರಲ್ಲಿ ಪ್ರಶಾಂತ್ ವಿನ್ನರ್, ಅಮರ್ದೀಪ್ ರನ್ನರ್, ಶಿವಾಜಿ ಮೂರನೇ ಸ್ಥಾನ, ಯವರ್ ನಾಲ್ಕನೇ ಸ್ಥಾನ, ಪ್ರಿಯಾಂಕಾ ಮತ್ತು ಅರ್ಜುನ್ ಕ್ರಮವಾಗಿ ಐದು ಮತ್ತು ಆರನೇ ಸ್ಥಾನಗಳನ್ನು ಪಡೆದರು. ಈ ಮೂಲಕ ತೆಲುಗು ಬಿಗ್ ಬಾಸ್ ಸೀಸನ್ 7 ಅಂತ್ಯಗೊಂಡಿತು.
ಸೀಸನ್ ಆರಂಭದಿಂದಲೂ ಪಲ್ಲವಿ ಪ್ರಶಾಂತ್ ತಮ್ಮ ಗಮನವನ್ನೆಲ್ಲ ಟಾಸ್ಕ್ಗಳ ಮೇಲೆಯೇ ಕೇಂದ್ರಿಕರಿಸಿದ್ದರು. ಅವರು ತಮ್ಮ ಸಾಮರ್ಥ್ಯವನ್ನು ಮಾತಿನ ಬದಲು ಆಟದಲ್ಲಿ ತೋರಿಸುತ್ತಿದ್ದರು. ತಮ್ಮ ಅದ್ಭುತ ಆಟದಿಂದಲೇ ಎದುರಾಳಿಗಳ ಬೆವರಿಳಿಸುತ್ತಿದ್ದರು. ಆದರೆ, ಪ್ರಶಾಂತ್ ಟಾಸ್ಕ್ನಲ್ಲಿ ಸೋತರೆ ಕಣ್ಣೀರಿಡುತ್ತಿದ್ದರು. ಮೊದಲಿಗೆ ಇದು ಸಿಂಪತಿ ಗಿಟ್ಟಿಸಿಕೊಳ್ಳುವ ಚಮಕ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ನಂತರದಲ್ಲಿ ಅದು ಪ್ರಶಾಂತ್ ಅವರ ಸೂಕ್ಷ್ಮ ಮನಸ್ಸಿನ ಪರಿಚಯವನ್ನು ಮಾಡಿಸಿಕೊಟ್ಟಿತು.
ಯಾರ ಮಾತನ್ನೂ ಲೆಕ್ಕಿಸದೇ ಗೆಲುವಿನತ್ತ ಗಮನ ಹರಿಸಿದ ಪ್ರಶಾಂತ್ ಕೊನೆಗೂ ಬಯಸಿದ್ದನ್ನು ಸಾಧಿಸಿದರು. ಅವರು ಮೊದಲು ಕೆಲಸಕ್ಕಾಗಿ ಕಾಯುತ್ತಿದ್ದ ಅದೇ ಸ್ಟುಡಿಯೋದಲ್ಲಿ ಹೆಚ್ಚು ಚಪ್ಪಾಳೆಗಳ ನಡುವೆ ಬಿಗ್ ಬಾಸ್ 7 ಟ್ರೋಫಿಯನ್ನು ಸ್ವೀಕರಿಸಿದರು. ಮತ್ತೊಂದೆಡೆ, ಅಮರ್ದೀಪ್ಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಮೊದಲಿನಿಂದಲೂ ಇದ್ದಾರೆ. ಉತ್ತಮ ಆಟದೊಂದಿಗೆ ಫೈನಲ್ವರೆಗೆ ಬಂದ ಅವರು ಬಿಗ್ ಬಾಸ್ 7ರ ರನ್ನರ್ ಅಪ್ ಆಗಿ ಹೊರಹೊಮ್ಮಿದರು.