ಚೆನ್ನೈ (ತಮಿಳುನಾಡು): ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ ಸಂಬಂಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರ ಚೆನ್ನೈನ ತಮ್ಮ ನಿವಾಸದಲ್ಲಿ ವಾಣಿ ಜಯರಾಂ ಅವರು ಶವವಾಗಿ ಪತ್ತೆಯಾಗಿರುವ ಕಾರಣ ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣದ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಇನ್ನಿಲ್ಲ: ಗಣ್ಯರಿಂದ ಸಂತಾಪ
2018ರಲ್ಲಿ ಪತಿ ಜಯರಾಂ ನಿಧನರಾದ ನಂತರ ವಾಣಿ ಅವರು ಚೆನ್ನೈನ ಹ್ಯಾಡೋಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು. ವಾಣಿ ಮತ್ತು ಜಯರಾಂ ದಂಪತಿಗೆ ಯಾವುದೇ ಮಕ್ಕಳು ಇಲ್ಲ. ಶುಕ್ರವಾರ ರಾತ್ರಿ ಮನೆಯಲ್ಲಿ ವಾಣಿ ಜಯರಾಂ ಒಬ್ಬರೇ ಇದ್ದು, ಬೀಗ ಹಾಕಿಕೊಂಡು ಮಲಗಿದ್ದರು. ವಾಣಿ ಜಯರಾಂ ಅವರ ನಿವಾಸದಲ್ಲಿ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದ ಕೆಲಸದಾಕೆ ಮಲಾರಕೋಡಿ ಎಂದಿನಂತೆ ಶನಿವಾರ ಬಂದಿದ್ದರು. ಆದರೆ, ವಾಣಿ ಜಯರಾಂ ಅವರು ಮನೆ ಬಾಗಿಲು ತೆರೆದಿರಲಿಲ್ಲ.
ಕೆಲಸದಾಕೆ ಹೇಳಿದ್ದೇನು?: ಈ ಬಗ್ಗೆ ಖುದ್ದು ಮಲಾರಕೋಡಿ ಮಾತನಾಡಿ, ನಾನು ಎಂದಿನಂತೆ ವಾಣಿ ಜಯರಾಂ ಅವರ ಮನೆಯ ಕೆಲಸಕ್ಕೆ ಬಂದಿದ್ದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮನೆಗೆ ಬಂದು ಐದು ಪದೇ ಪದೇ ಬೆಲ್ ಬಾರಿಸಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಲ್ಲದೇ, ನನ್ನ ಪತಿ ಕೂಡ ವಾಣಿ ಜಯರಾಂ ಅವರಿಗೆ ಕರೆ ಮಾಡಿದರೂ, ಅವರು ಕರೆ ಸ್ವೀಕರಿಸಲಿಲ್ಲ. ಈ ನಿವಾಸದಲ್ಲಿ ವಾಣಿ ಜಯರಾಂ ಒಬ್ಬರೇ ವಾಸವಾಗಿದ್ದರು ಎಂದು ತಿಳಿಸಿದ್ದಾರೆ.
ವಾಣಿ ಜಯರಾಂ ಅವರ ಮನೆಯ ಬಾಗಿಲು ತೆರೆಯಾದ ಕಾರಣ ಕೂಡಲೇ ವಾಣಿ ಜಯರಾಂ ಅವರ ಸಹೋದರಿ ಉಮಾ ಅವರಿಗೆ ಕೆಲಸದಾಕೆ ಮಲಾರಕೋಡಿ ಮಾಹಿತಿ ನೀಡಿದ್ದರು. ಅಂತೆಯೇ, ಉಮಾ ಮತ್ತು ಕೆಲಸದಾಕೆ ಇಬ್ಬರೂ ಬೇರೆ ಕೀಲಿ ಬಳಸಿ ಬಾಗಿಲು ತೆಗೆದು ಮನೆ ಒಳಗೆ ಪ್ರವೇಶಿಸಿದ್ದರು. ಆಗ ವಾಣಿ ಜಯರಾಂ ಅವರು ತಮ್ಮ ಮಲಗುವ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅಲ್ಲದೇ, ಅವರ ಹಣೆಯ ಮೇಲೆ ಗಾಯದ ಗುರುತುಗಳು ಪತ್ತೆಯಾಗಿದ್ದವು ಎಂದು ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆ: ವಾಣಿ ಜಯರಾಂ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮನೆಗೆ ಭೇಟಿ ನೀಡಿದ ಪೊಲೀಸರು ವಾಣಿ ಜಯರಾಂ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಚೆನ್ನೈನ ಕಿಲ್ಪಾಕ್ ಆಸ್ಪತ್ರೆಗೆ ರವಾನಿಸಿದ್ದರು. ಅಲ್ಲದೇ, ನಂತರ ಪೊಲೀಸರು ಮತ್ತು ವಿಧಿವಿಜ್ಞಾನ ತಂಡ ವಾಣಿ ಜಯರಾಂ ನಿವಾಸದಲ್ಲಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಡಿಸಿಪಿ ಶೇಖರ್ ದೇಶಮುಖ್ ಪ್ರತಿಕ್ರಿಯಿಸಿ, ವಾಣಿ ಜಯರಾಂ ಸಾವಿನ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:'ಭಾವವೆಂಬ ಹೂವು ಅರಳಿ' ಮೂಲಕ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಗಾಯಕಿ ವಾಣಿ ಜಯರಾಂ