ವಾಷಿಂಗ್ಟನ್ :ಹಾಲಿವುಡ್ನಲ್ಲಿ 'ಮಾಸ್ಟರ್ ಆಫ್ ಸ್ಟೋರಿ ಟೇಲಿಂಗ್' ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ನಿರ್ದೇಶಕ ರಾಜಮೌಳಿ 'ಗೋಲ್ಡನ್ ಗ್ಲೋಬ್ ಅವಾರ್ಡ್'ನಲ್ಲಿ ಭೇಟಿಯಾಗಿರುವ ಫೋಟೋವನ್ನು ಹಂಚಿಕೊಂಡು, 'ನಾನು ದೇವರನ್ನು ಭೇಟಿಯಾದೆ' ಎಂದು ಬರೆದುಕೊಂಡಿದ್ದಾರೆ.
ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ:ಭಾರತಕ್ಕೆ ಪ್ರತಿಷ್ಠಿತ ಗ್ಲೋಲ್ಡನ್ ಗ್ಲೋಬ್ ಅವಾರ್ಡ್ ತಂದುಕೊಟ್ಟ 'ಆರ್ ಆರ್ ಆರ್' ಚಿತ್ರದ ʼನಾಟು ನಾಟುʼ ಹಾಡು ಇದೀಗ ವಿದೇಶಿ ಮಂದಿಯಲ್ಲೂ ಮೋಡಿ ಮಾಡಿದೆ. 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ನಲ್ಲಿ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದು, ಈ ವೇಳೆ ಸಂತಸವನ್ನು ಹಂಚಿಕೊಂಡು ನಿರ್ದೇಶಕ ರಾಜಮೌಳಿ ಅವರು ʼಆರ್ ಆರ್ ಆರ್ʼ ಪಾರ್ಟ್ -2 ಮಾಡುವ ಬಗ್ಗೆಯೂ ಮಾತಾನಾಡಿದ್ದರು. ಬಾಹುಬಲಿ ಸರಣಿಯಂತಹ ಐತಿಹಾಸಿಕ ಸಿನಿಮಾಗಳನ್ನು ಕೊಟ್ಟಿರುವ ರಾಜಮೌಳಿ ತನ್ನ ಮೆಚ್ಚಿನ ನಿರ್ದೇಶಕರನ್ನು ಭೇಟಿಯಾಗಿದ್ದಾರೆ.
'ನಾನು ದೇವರನ್ನು ಭೇಟಿಯಾದೆ': ಈ ಸಮಾರಂಭದಲ್ಲಿ ಅವರು ವಿಶೇಷ ವ್ಯಕ್ತಿಯನ್ನು ಭೇಟಿಯಾದ ಸಂತಸ ವ್ಯಕ್ತಪಡಿಸಿದ್ದಾರೆ. 'ನಾನು ದೇವರನ್ನು ಭೇಟಿಯಾದೆ' ಎಂದು ಹೇಳಿದ್ದಾರೆ. ರಾಜಮೌಳಿ ಭೇಟಿಯಾದ ದೇವರು ಮತ್ಯಾರು ಅಲ್ಲ ಖ್ಯಾತ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್. ವಿಶ್ವ ಸಿನಿಮಾರಂಗದ ಸಾರ್ವಕಾಲಿಕ ಶ್ರೇಷ್ಠ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಭೇಟಿಯಾಗಿ ಭಾವಪರವಶರಾಗಿದ್ದಾರೆ. ಸ್ಟೀವನ್ ಸ್ಪೀಲ್‌ಬರ್ಗ್ ತನ್ನ ದೇವರು ಎಂದು ರಾಜಮೌಳಿ ಕರೆದಿದ್ದಾರೆ. ಸ್ಟೀವನ್ ಜೊತೆ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಪೋಸ್ಟ್ ಮಾಡಿದ ಕೂಡಲೇ, ಅಭಿಮಾನಿಗಳು ಕಾಮೆಂಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. 'ಸಿನಿಮಾ ಮೀಟ್ಸ್ ಸಿನಿಮಾ' ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. "ನೀವಿಬ್ಬರೂ ನಮ್ಮ ಬಾಲ್ಯವನ್ನು ಸ್ಮರಣೀಯವಾಗಿಸಿದ ದಂತಕಥೆಗಳು" ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ.