ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಟ್ರೆಂಡ್ ಜೋರಾಗಿದೆ. ಈ ಮಧ್ಯೆ ಇದೀಗ 12ನೇ ಶತಮಾನದ ಮಹಾಶರಣ ಶ್ರೀ ಅಲ್ಲಮ ಪ್ರಭು ಅವರ ಜೀವನಾಧಾರಿತ ವ್ಯೋಮಕಾಯ ಸಿದ್ದ 'ಶ್ರೀ ಅಲ್ಲಮಪ್ರಭು' ಎಂಬ ಸಿನಿಮಾ ಬರ್ತಾ ಇದೆ. ಬಹುತೇಕ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ಈ ಸಿನಿಮಾದ, ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಟ ನೆನಪರಲಿ ಪ್ರೇಮ್ ಆಗಮಿಸಿ ಚಿತ್ರದ ಟ್ರೈಲರ್ ಅನಾವರಣ ಮಾಡಿದರು. ಈ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್ ಮುಖ್ಯ ಅತಿಥಿಯಾಗಿ ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದರು.
ಬಳಿಕ ಮಾತನಾಡಿದ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಯಾಕೆ ಕರೆದರೂ ಎಂದು ಯೋಚಿಸುತ್ತಿದ್ದೆ?. ಅವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೇನೆ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು. ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳಿರುವುದು ನಮ್ಮ ಭಾರತಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾ ಪುರುಷರಾದ ಶ್ರೀ ಅಲ್ಲಮಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಶುಭವಾಗಲಿ ಎಂದರು.
ನಟ ಪ್ರೇಮ್ ಮಾತನಾಡಿ, ನಮ್ಮದು ಪುಣ್ಯಭೂಮಿ. ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಹೊಡೆದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಎಂದರೆ ಅದಕ್ಕೆ ಈ ಸಾಧು-ಸಂತರ ಆಶೀರ್ವಾದವೇ ಕಾರಣ. ಮಹಾ ಶರಣ ಅಲ್ಲಮ ಪ್ರಭುಗಳ ಕುರಿತಾದ ಈ ಚಿತ್ರಕ್ಕೆ ಒಳಿತಾಗಲಿ ಎಂದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್ ಕೂಡ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಎನ್ ಕೌಂಟರ್ ದಯಾನಾಯಕ್ ಸಿನಿಮಾದಲ್ಲಿ ಅಭಿನಯಿಸಿದ್ದ, ಸಚಿನ್ ಸುವರ್ಣ ಅಲ್ಲಮ್ಮ ಪ್ರಭು ಪಾತ್ರ ಮಾಡಿದ್ದಾರೆ. ಇದರ ಜತೆಗೆ ನೀನಾಸಂ ಅಶ್ವಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಹೀಗೆ ದೊಡ್ಡ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಶರಣ್ ಗದ್ವಾಲ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.