ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 10' ಕೊನೆ ಹಂತ ಸಮೀಪಿಸುತ್ತಿದೆ. ಬಗೆ ಬಗೆಯ ಟಾಸ್ಕ್, ಟ್ವಿಸ್ಟ್ ಕೊಡೋ ಮೂಲಕ ಕನ್ನಡಿಗರಿಗೆ ಫುಲ್ ಎಂಟರ್ಟೈನ್ಮೆಂಟ್ ಕೊಡೋದ್ರಲ್ಲಿ ಈ ರಿಯಾಲಿಟಿ ಶೋ ಯಶಸ್ವಿ ಆಗಿದೆ. ಪ್ರೇಕ್ಷಕರ ಸಂಖ್ಯೆಯೂ ದಿನೇ ದಿನೆ ಹೆಚ್ಚುತ್ತಿದೆ ಎಂದು ನಂಬಲಾಗಿದೆ. ಪ್ರತಿದಿನದ ಸಂಚಿಕೆಗಾಗಿ ಅಪಾರ ಸಂಖ್ಯೆಯ ಪ್ರೇಕ್ಷಕರು ಕಾತರರಾಗಿರುತ್ತಾರೆ.
ವಾರದ ದಿನಗಳಲ್ಲಿ ಟಾಸ್ಕ್ ಚಿಂತೆಯಲ್ಲಿರುವ ಸ್ಪರ್ಧಿಗಳಿಗೆ ವಾರಾಂತ್ಯ ಬಂತೆಂದರೆ ಎಲಿಮಿನೇಶನ್ ಬಿಸಿ ಕಾಡುತ್ತೆ. ಅಭಿನಯ ಚಕ್ರವರ್ತಿ ಸುದೀಪ್ ಬಂದು 'ವೀಕೆಂಡ್ ವಿತ್ ಸುದೀಪ್' ಕಾರ್ಯಕ್ರಮ ನಡೆಸಿಕೊಡುತ್ತಾರೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮಕ್ಕೆ ಸಪರೇಟ್ ಫ್ಯಾನ್ ಬೇಸ್ ಇದೆ. ವಾರವಿಡೀ ಕಾರ್ಯಕ್ರಮ ವೀಕ್ಷಿಸದಿರುವವರೂ ಕೂಡ ಕಿಚ್ಚನಿಗಾಗೇ ವಾರಾಂತ್ಯದ ಸಂಚಿಕೆಗಳನ್ನು ನೋಡೋದುಂಟು. ಸುದೀಪ್ ನಿರೂಪಣೆ ಶೈಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಆದ್ರೆ ಈ ವಾರಾಂತ್ಯದ ಕಾರ್ಯಕ್ರಮವನ್ನು ನಟ ಸುದೀಪ್ ನಡೆಸಿಕೊಟ್ಟಿಲ್ಲ.
ಶನಿವಾರದ ಸಂಚಿಕೆಗೆ ಬಿಗ್ ಬಾಸ್ ವಿಜೇತೆ, ಹಿರಿಯ ನಟಿ ಶ್ರುತಿ ಆಗಮಿಸಿ ನ್ಯಾಯ ಪಂಚಾಯಿತಿ ನಡೆಸಿಕೊಟ್ಟಿದ್ದರು. ಇಂದಿನ ಸಂಚಿಕೆಯಲ್ಲಿ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಮಿಂಚು ಹರಿಸಲಿದ್ದಾರೆ. 'ಮನೆಗೆ ಬಂದ್ರು ಶೈನ್ ಶೆಟ್ಟಿ ಮತ್ತು ಶುಭಾ; ಇಂದು ಡಬಲ್ ಎಲಿಮಿನೇಶನ್?' ಶೀರ್ಷಿಕೆಯಡಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಸಾಕಷ್ಟು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.