ಹೈದರಾಬಾದ್: ಆಸ್ಕರ್ ಪ್ರಶಸ್ತಿ ವಿಜೇತ ಆರ್‌ಆರ್‌ಆರ್ ಚಿತ್ರದ ಮೂಲಕ ವಿಶ್ವಾದ್ಯಂತ ಜನಪ್ರಿಯತೆ ಗಳಿಸಿದ 'ಗ್ಲೋಬಲ್ ಸ್ಟಾರ್' ರಾಮ್ ಚರಣ್ ಹೊಸ ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸ್ಥಾಪಿಸಲಾದ ಪ್ರೊಡಕ್ಷನ್ ಹೌಸ್ 'ವಿ ಮೆಗಾ ಪಿಕ್ಚರ್ಸ್' ಸಂಸ್ಥೆ ಸ್ಥಾಪಿಸಲು ತಮ್ಮ ಸ್ನೇಹಿತ ಯುವಿ ಕ್ರಿಯೇಷನ್‌ನ ವಿಕ್ರಮ್ ರೆಡ್ಡಿ ಅವರಿಗೆ ಸಾಥ್ ಕೊಟ್ಟಿದ್ದಾರೆ.
ಈ ಬೆಳವಣಿಗೆಯೊಂದಿಗೆ ಪ್ರೊಡಕ್ಷನ್ ಹೌಸ್ ಪ್ಯಾನ್-ಇಂಡಿಯನ್ ಪ್ರೇಕ್ಷಕರನ್ನು ಪೂರೈಸುತ್ತದೆ. ಉದಯೋನ್ಮುಖ ಪ್ರತಿಭೆಗಳ ಅನಾವರಣಕ್ಕೆ ಇದೊಂದು ಮುಕ್ತ ವೇದಿಕೆಯಾಗಲಿದೆ. ಸಂಸ್ಥೆಯು ಅಸಾಧಾರಣ ಕಥಾಹಂದರ ಮತ್ತು ಅದ್ಭುತ ಮನರಂಜನೆಯೊಂದಿಗೆ ಪ್ರೇಕ್ಷಕರನ್ನು ಸೆಳೆಯಲು ಸಿದ್ಧವಾಗಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. 'ಚಲನಚಿತ್ರ ನಿರ್ಮಾಣ ಕಲೆಯ ಬಗ್ಗೆ ವಿಶೇಷ ಉತ್ಸಾಹ ಹೊಂದಿರುವ ದೂರದೃಷ್ಟಿಯ ತಂಡದ ನೇತೃತ್ವದ ವಿ ಮೆಗಾ ಪಿಕ್ಚರ್ಸ್ ಉದ್ಯಮದಲ್ಲಿ ಕಡಿಮೆ ಪ್ರಾತಿನಿಧ್ಯದ ಧ್ವನಿಗಳಿಗೆ ವೇದಿಕೆಯನ್ನು ಒದಗಿಸಲು ಬದ್ಧವಾಗಿದೆ' ಎಂದು ಪ್ರೊಡಕ್ಷನ್ ಹೌಸ್‌ನ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
"ವಿ ಮೆಗಾ ಪಿಕ್ಚರ್ಸ್‌ನಲ್ಲಿ ನಾವು ವೈವಿಧ್ಯತೆಯನ್ನು ಅಳವಡಿಸಿಕೊಳ್ಳುವ ಮತ್ತು ತಾಜಾ ದೃಷ್ಟಿಕೋನಗಳನ್ನು ಸ್ವಾಗತಿಸುವ ಅಂತರ್ಗತ ಮತ್ತು ಸಹಯೋಗದ ವಾತಾವರಣವನ್ನು ಬೆಳೆಸಲು ಸಮರ್ಪಿತರಾಗಿದ್ದೇವೆ. ಸೃಜನಶೀಲತೆ ಮತ್ತು ಗಡಿಗಳನ್ನು ದಾಟಿ ನಾವು ಮನರಂಜನಾ ಉದ್ಯಮದ ಮೇಲೆ ಶಾಶ್ವತವಾದ ಪರಿಣಾಮವನ್ನು ಸೃಷ್ಟಿಸುವ ಗುರಿ ಹೊಂದಿದ್ದೇವೆ ಮತ್ತು ಹೊಸ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ದಾರಿ ಮಾಡಿಕೊಡುತ್ತೇವೆ." - ನಟ ರಾಮ್ ಚರಣ್
"ಈ ರೋಮಾಂಚನಕಾರಿ ಪ್ರಯಾಣವನ್ನು ಪ್ರಾರಂಭಿಸಲು ನಾವು ಸಂತೋಷಪಡುತ್ತೇವೆ. ಪ್ರತಿಭಾವಂತ ಕಲಾವಿದರು, ಬರಹಗಾರರು, ನಿರ್ದೇಶಕರು ಮತ್ತು ತಂತ್ರಜ್ಞರೊಂದಿಗೆ ಸಹಕರಿಸುವ ಮೂಲಕ ವಿ ಮೆಗಾ ಪಿಕ್ಚರ್ಸ್ ಹೊಸ ದೃಷ್ಟಿಕೋನಗಳನ್ನು ತೆರೆಯುವ ಗುರಿಯನ್ನು ಹೊಂದಿದೆ."- ವಿಕ್ರಮ್ ರೆಡ್ಡಿ, ಯುವಿ ಕ್ರಿಯೇಷನ್.