'ಕಾಲ್ ಕೆಜಿ ಪ್ರೀತಿ' ಹಾಗು 'ಪಂಚತಂತ್ರ' ಸಿನಿಮಾಗಳ ಮೂಲಕ ಸ್ಯಾಂಡಲ್‌ವು ಡ್‌ನಲ್ಲಿ ಗುರುತಿಸಿಕೊಂಡಿರುವ ನಟ ವಿಹಾನ್ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ವಿಹಾನ್ಗೆ ನಾಯಕಿಯಾಗಿ 'ನಮ್ಮನೆ ಯುವರಾಣಿ' ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದ ಅಂಕಿತಾ ಅಮರ್ ನಟಿಸಲಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾವನ್ನ ಪರಂವಃ ಸ್ಟುಡಿಯೋ ಅಡಿ ನಿರ್ಮಾಣ ಮಾಡುತ್ತಿದ್ದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ನಟ ವಿಹಾನ್, ಯೋಗರಾಜ್ ಭಟ್ ನಿರ್ದೇಶನದ "ಪಂಚತಂತ್ರ" ಸಿನಿಮಾದಲ್ಲಿ ನಟಿಸಿದ ಬಳಿಕ ಬೇರೆ ಸಿನಿಮಾಗಳತ್ತ ಮುಖ ಮಾಡಿರಲಿಲ್ಲ. ಇದೀಗ ವಿಶೇಷ ಕಥೆಯೊಂದಿಗೆ ಮತ್ತೆ ಪ್ರೇಕ್ಷಕರ ಮುಂದೆ ಆಗಮಿಸುತ್ತಿದ್ದಾರೆ. ರೊಮ್ಯಾನ್ಸ್ ಡ್ರಾಮಾ ಶೈಲಿಯ ಈ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಈಗಾಗಲೇ ಶುರುವಾಗಿವೆ. ಚಿತ್ರದಲ್ಲಿ ನಾಯಕನಿಗೆ ಮೂರು ಹಂತಗಳಿರಲಿವೆ. ಕಾಲೇಜ್ ವಿದ್ಯಾರ್ಥಿ, ಕ್ರಿಕೆಟ್ ಆಟಗಾರ ಹಾಗೂ ಬಿಜಿನೆಸ್ ಮ್ಯಾನ್ ಆಗಿ ವಿಹಾನ್ ಕಾಣಿಸಿಕೊಳ್ಳಲಿದ್ದಾರೆ.
ಹಾಗಾದ್ರೆ ಈ ಚಿತ್ರದ ನಿರ್ದೇಶಕರು ಯಾರು?: ರಕ್ಷಿತ್ ಅವರ ಸೆವೆನ್ ಆ್ಯಡ್ಸ್ ಟೀಮ್‌ನಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿರುವ ಚಂದ್ರಜೀತ್ ಬೆಳ್ಳಿಯಪ್ಪ ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಈ ಮೊದಲು ರಿಷಬ್ ಶೆಟ್ಟಿ ಅವರ ಕಥಾಸಂಗಮ ಸಿನಿಮಾದಲ್ಲಿನ ರೇನ್‌ಬೋ ಲ್ಯಾಂಡ್ ಏಪಿಸೋಡ್ ಅನ್ನು ಚಂದ್ರಜಿತ್ ನಿರ್ದೇಶನ ಮಾಡಿದ್ದರು. ಅದಕ್ಕೂ ಮೊದಲು "ಅವನೇ ಶ್ರೀಮನ್ನಾರಾಯಣ ಚಿತ್ರದ ಬರವಣಿಗೆಯ ಭಾಗವಾಗಿದ್ದರು.