ಕನ್ನಡದ ಬಿಗ್ ಬಾಸ್ ನಾಲ್ಕನೇ ವಾರ ಮುಗಿದಿದೆ. ಬುಲೆಟ್ನಂತಹ ಡೈಲಾಗ್ಗಳಿಂದಲೇ ಗಮನ ಸೆಳೆದಿದ್ದ ಬುಲೆಟ್ ರಕ್ಷಕ್ ಮನೆಯಿಂದ ಈ ವಾರ ಹೊರಬಿದ್ದಿದ್ದಾರೆ. ಬಿಗ್ ಮನೆಯಿಂದ ಹೊರಗೆ ಹೋಗುತ್ತಿರುವುದಕ್ಕೆ ಅವರಲ್ಲಿ ಯಾವ ಬೇಸರವೂ ಇಲ್ಲವಂತೆ. ಹಾಗೆ ನೋಡಿದರೆ, ಪರಿಸ್ಥಿತಿ ಇನ್ನಷ್ಟು ಕೆಡುವ ಮೊದಲೇ ಹೊರಬಂದಿದ್ದಕ್ಕೆ ಖುಷಿಯೇ ಇದೆಯಂತೆ. ಮನೆಯಿಂದ ಹೊರಬಿದ್ದ ನಂತರ ಸಂದರ್ಶನ ನೀಡಿರುವ ರಕ್ಷಕ್, ಬಿಗ್ ಬಾಸ್ ಮನೆಯೊಳಗಿನ ಅನುಭವ ಹಂಚಿಕೊಂಡಿದ್ದಾರೆ. ಅವರ ಅನುಭವ ಕಥನವನ್ನು ಅವರ ಮಾತಿನಲ್ಲಿ..
'ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದ್ದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳು ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನಿಸುತ್ತೆ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. ‘ಉತ್ತಮ’ ತಗೊಂಡೆ. ಎಲ್ಲರ ಜೊತೆ ತುಂಬಾ ಒಳ್ಳೆಯ ಬಾಂಡಿಂಗ್ ಇಟ್ಕೊಂಡಿದ್ದೆ. ಈ ಎಲ್ಲವೂ ಇನ್ನೂ ಸ್ಟ್ರಾಂಗ್ ಆಗುವ ಮೊದಲೇ ಆಚೆಬಂದೆ ಅಂತ ಖುಷಿ ಇದೆ.'
'ಹೋಗ್ತಾ ಹೋಗ್ತಾ ಇವೆಲ್ಲವೂ ಇನ್ನೂ ವರ್ಸ್ಟೇ ಆಗಿರೋದು. ನಾನು ಹಬ್ಬದ ಟೈಮಲ್ಲಿ ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದೆ. ನಮ್ಮಮ್ಮ, ‘ನೀನಿಲ್ಲಾ ಅಂದ್ರೆ ಮನೇಲಿ ಕಳೆ ಇರಲ್ವೋ’ ಅಂತಿದ್ರು. ಯಾಕಂದ್ರೆ ನಮ್ಮನೇಲಿ ನಾನೊಬ್ನೇ ಸೌಂಡು ಮಾಡೋನು. ಅದು ಸಡನ್ನಾಗಿ ನೆನಪಾಗೋಯ್ತು. ‘ಓ ಇವತ್ತು ಹಬ್ಬ. ಮನೇಲಿ ಚಿತ್ರನ್ನ, ವಡೆ, ಪಲ್ಯ ಎಲ್ಲ ಮಾಡಿರ್ತಾರೆ. ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಇವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಅಳುತಿದೀವಿ. ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಪಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಬಿಗ್ ಬಾಸ್ ಮನೆಯಲ್ಲಿ ಅನ್ನದ ಬೆಲೆ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡೆ.'
'ಈ ಜರ್ನಿಯನ್ನು ಇನ್ನೂ ಕಂಟಿನ್ಯೂ ಮಾಡಬೇಕಿತ್ತು ನಾನು. ನನಗೆ ನಾನು ಯಾವತ್ತೂ ಮೋಸ ಮಾಡಿಕೊಂಡಿಲ್ಲ. ನಾಮಿನೇಷನ್ ಆಗಿರೋರ ಪಟ್ಟಿಯಲ್ಲಿ ನಾನು ಇರ್ತೀನಿ ಅಂತ್ಲೇ ಅಂದುಕೊಂಡಿರಲಿಲ್ಲ. ಸೆಕೆಂಡೋ ಥರ್ಡೋ ಸೇಫ್ ಆಗಿಬಿಡ್ತೀನಿ ಅಂದ್ಕೊಂಡಿದ್ದೆ. ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರುತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ.'
'ಈ ವರ್ಷದ ಬಿಗ್ ಬಾಸ್ ತುಂಬಾ ಕನ್ಫ್ಯೂಷನ್, ತುಂಬ ಡಿಫರೆಂಟ್ ಆಗಿತ್ತು. ತುಂಬಾ ಯೂನಿಕ್ ಆಗಿದೆ. ಯಾರಿಗೂ ಊಹೆ ಮಾಡಕ್ಕಾಗಲ್ಲ. ಸ್ಟೇಜ್ ಹತ್ತುವಾಗಲೇ ಒಂದು ಖುಷಿ ಇತ್ತು. ಸ್ಟೇಜ್ ಹತ್ತಾದ್ಮೇಲೆ ಒಂದು ಟಾಸ್ಕ್ ಕೊಟ್ರು. ಪೋಲಿಂಗ್ ಇತ್ತು. ನಾವು ಅಸಮರ್ಥರಾಗಿ ಒಳಗಡೆ ಹೋದ್ವಿ. ಎಲ್ಲರೂ ಕಷ್ಟಪಟ್ಟು, ಗುರುತಿಸಿಕೊಂಡು ಅಸಮರ್ಥರಿಂದ ಸಮರ್ಥನಾದೆ. ಕ್ಯಾಪ್ಟನ್ ಆದೆ. ಉತ್ತಮ ತಗೊಂಡೆ.'