ಕನ್ನಡ ಚಿತ್ರರಂಗಲ್ಲಿ 99 ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ 'ಓಂ ಸಾಯಿ ಪ್ರಕಾಶ್'. ಈಗ 100ನೇ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಸೆಂಚುರಿ ಬಾರಿಸಲು ಸಜ್ಜಾಗಿದ್ದಾರೆ. ಶ್ರೀ ಸಾಯಿಬಾಬಾರ ಮಹಾನ್ ಭಕ್ತನಾಗಿರುವ ಇವರು, ದೇವಮಾನವ ಪುಟ್ಟಪರ್ತಿ ಸಾಯಿಬಾಬಾ ಮಹಿಮೆ ಬಗ್ಗೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಇದಕ್ಕೆ 'ಶ್ರೀ ಸತ್ಯಸಾಯಿ ಅವತಾರ' ಎಂಬ ಟೈಟಲ್ ಇಟ್ಟಿದ್ದಾರೆ.
ಈ ಚಿತ್ರದ ಟೈಟಲ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ನೆರವೇರಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮಹರ್ಷಿ ಆನಂದ ಗುರೂಜಿ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದರು. ಸಾಯಿಗೋಲ್ಡ್ ಸರವಣ, ನಿರ್ಮಾಪಕ ಡಾ.ದಾಮೋದರ್, ಹಿರಿಯಸಾಹಿತಿ ದೊಡ್ಡರಂಗೇಗೌಡರು, ಡಿಂಗ್ರಿ ನಾಗರಾಜ್, ಗಣೇಶರಾವ್ ಕೇಸರಕರ್ ಮುಂತಾದವರು ಸಮಾರಂಭದ ಮುಖ್ಯ ಆತಿಥಿಗಳಾಗಿ ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಎಸ್.ಎಂ ಕೃಷ್ಣ, ಈಗಾಗಲೇ ಸಾಯಿಪ್ರಕಾಶ್ ಅವರು ಶಿರಡಿ ಸಾಯಿಬಾಬಾರ ಮೇಲೆ ಸಿನಿಮಾ ಮಾಡಿದ್ದಾರೆ. ಜೊತೆಗೆ ಅವರೇ ಬಾಬಾನಾಗಿ ಕಾಣಿಸಿಕೊಂಡಿದ್ದಾರೆ. ಈಗ ಪುಟ್ಟಪರ್ತಿ ಸಾಯಿಬಾಬಾ ಅವರ ಬಗ್ಗೆ ಚಿತ್ರ ಮಾಡಲು ಸಿದ್ದರಾಗಿದ್ದಾರೆ. ಅವರಿಗೆ ಬಾಬಾರ ಆಶೀರ್ವಾದವಿದ್ದು, ಯಶಸ್ಸಾಗಲಿ ಎಂದು ಹಾರೈಸಿದರು.
ಮಹರ್ಷಿ ಆನಂದ ಗುರೂಜಿ ಮಾತನಾಡಿ, ಸತ್ಯ ಸಾಯಿಬಾಬಾ ಅವರು ದೈವಾಂಶ ಸಂಭೂತರು. ಒಬ್ಬ ಸಿಎಂ ಮಾಡುವುದಕ್ಕಿಂತಲೂ ಹೆಚ್ಚಿನ ಜನಸೇವಾ ಕಾರ್ಯಗಳನ್ನು ಅವರು ಮಾಡಿದ್ದಾರೆ. ಜನರಿಗಾಗಿ ಅವರು ಕಟ್ಟಿಸಿರುವ ಆಸ್ಪತ್ರೆ, ವೈದ್ಯಕೀಯ ಸೇವೆ, ಹಸಿದು ಬಂದವರಿಗೆ ಅನ್ನ ನೀಡುವ ಕಾಯಕ ತುಂಬಾ ದೊಡ್ಡದು. ಬಾಬಾ ಅವರು ಬೆಳೆದು ಬಂದ ಹಾದಿಯನ್ನು ಬೆಳ್ಳಿ ತೆರೆಯ ಮೇಲೆ ತರಲು ಹೊರಟಿರುವ ಈ ನಿರ್ಮಾಪಕರಿಗೆ ಬಾಬಾರ ಆಶೀರ್ವಾದವಿದೆ ಎಂದರು.
ಸಾಯಿ ಪ್ರಕಾಶ್ ನನಗೆ ಬಹಳ ಆತ್ಮೀಯರು. ಅವರಲ್ಲಿ ಒಳ್ಳೆಯ ಕವಿಯೂ ಇದ್ದಾರೆ. ಭಕ್ತಿ ಪ್ರಧಾನ ಚಿತ್ರಗಳನ್ನು ತುಂಬಾ ಚೆನ್ನಾಗಿ ತೆಗೆಯುವ ಕಲೆ ಅವರಿಗಿದೆ ಎಂದು ಹಿರಿಯ ಸಾಹಿತಿ ದೊಡ್ಡರಂಗೇಗೌಡರು ಹೇಳಿದರು.
ಸಾಯಿವೇದಿಕ್ ಫಿಲಂಸ್ ಮೂಲಕ ಡಾ.ದಾಮೋದರ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಜೆ.ಜಿ ಕೃಷ್ಣ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸುತ್ತಿದ್ದು, ಗಣೇಶ್ ನಾರಾಯಣ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದೀಪು ಎಸ್. ಕುಮಾರ್ ಸಂಕಲನ ಚಿತ್ರಕ್ಕಿದೆ. ಆದರೆ ಸಾಯಿಬಾಬಾ ಪಾತ್ರ ಯಾರು ಮಾಡ್ತಾರೆ? ಎಂಬುವುದನ್ನು ಇನ್ನೂ ಬಹಿರಂಗ ಪಡಿಸಿಲ್ಲ.
ಇದನ್ನೂ ಓದಿ:ಕಾಫಿ ವಿತ್ ಕರಣ್-7: ಸಮಂತಾರ ಬ್ಯಾಚುಲರ್ ಪಾರ್ಟಿಯಲ್ಲಿ ರಣವೀರ್ ಸಿಂಗ್ ಡ್ಯಾನ್ಸರ್ ಅಂತೆ