ಮುಂಬೈ (ಮಹಾರಾಷ್ಟ್ರ):ವಿಶ್ವದ ಅತ್ಯಂತ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಮಿಸ್ ಯೂನಿವರ್ಸ್ನಲ್ಲಿ ತಾಯಂದಿರು ಮತ್ತು ವಿವಾಹಿತ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡುವ ಮೂಲಕ ತನ್ನ ಸ್ಪರ್ಧೆಯ ಅರ್ಹತೆಯನ್ನು ವಿಸ್ತರಿಸುತ್ತಿದೆ. ಇದು ಐತಿಹಾಸಿಕ ನಿರ್ಧಾರವಾಗಿದ್ದು, ಹಲವರು ಸ್ವಾಗತಿಸಿದ್ದಾರೆ. ಹಲವು ಕಠಿಣ ಮಾನದಂಡಗಳನ್ನು ಹೊಂದಿದ್ದ ಈ ಸ್ಪರ್ಧೆಯಲ್ಲಿ, ಬರುವ ಅಂದರೆ 2023 ರಿಂದ ಪ್ರಾರಂಭವಾಗುವ ಸ್ಪರ್ಧೆಯ ಸ್ಪರ್ಧಾಳುಗಳಿಗೆ ಈ ಮೇಲಿನ ಅವಕಾಶಗಳ ಜೊತೆಗೆ ಕೆಲವು ಸಡಿಲಿಕೆ, ವಿಶೇಷ ಅನುಮತಿಗಳನ್ನು ಮಾರ್ಪಾಡು ಮಾಡಲಾಗಿದೆ.
ಇಲ್ಲಿಯವರೆಗೆ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ಮಿಸ್ ಯೂನಿವರ್ಸ್ನಲ್ಲಿ ಇನ್ನು ಮುಂದೆ ವಿವಾಹಿತ ಮಹಿಳೆಯರು ಮತ್ತು ತಾಯಂದಿರು ಕೂಡ ಸ್ಪರ್ಧಿಸಬಹುದು ಎಂದು ಹೇಳಿದೆ. ಪ್ರತಿ ವರ್ಷ 80 ದೇಶಗಳ ರೂಪದರ್ಶಿಯರು ಈ ಸ್ಪರ್ಧೆಯಲ್ಲಿ ಭಾಗವಹಿದರೆ ಅದರಲ್ಲಿ ಕೇವಲ ಒಬ್ಬರು ಮಾತ್ರ ಈ ಕಿರೀಟ ಧರಿಸಲು ಸಾಧ್ಯ. ಆದರೆ, ಹಲವರಿಗೆ ಗೆಲ್ಲುವ ಆಸೆ ಇರಲಿ, ಈ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಒಂದು ಸವಾಲಾಗಿತ್ತು. ಅದಕ್ಕೆ ಕಾರಣ ಅಲ್ಲಿಯ ಕಠಿಣ ಮಾನದಂಡಗಳು. ಆದರೆ, ಈಗ ಲೆಕ್ಕಾಚಾರ ಬದಲಾಗಿದೆ. ಒಂದು ಕಾಲದಲ್ಲಿ ಅವಿವಾಹಿತರಿಗೆ ಮಾತ್ರ ಸೀಮಿತವಾಗಿದ್ದ ಈ ಸ್ಪರ್ಧೆಗಳಲ್ಲಿ ಈಗ ವಿವಾಹಿತ ಮಹಿಳೆಯರು ಮತ್ತು ಮಕ್ಕಳ ತಾಯಂದಿರು ಭಾಗವಹಿಸಬಹುದು ಎಂದು ಹೇಳಿದೆ. ಈ ಬದಲಾವಣೆಯನ್ನು ಮಾಜಿ ವಿಶ್ವ ಸುಂದರಿಯರು ಸೇರಿದಂತೆ ಹಲವುರು ಸ್ವಾಗತಿಸಿದ್ದಾರೆ.
ಈ ಹಿಂದಿನ ವಿಶ್ವ ಸುಂದರಿ ಸ್ಪರ್ಧೆಯ ನಿಯಮಗಳ ಪ್ರಕಾರ ಭಾಗವಹಿಸುವ ಸ್ಪರ್ಧಾಳುಗಳು ಅವಿವಾಹಿತರಾಗಿಯೇ ಇರಬೇಕಿತ್ತು. ಮಕ್ಕಳಾದ ತಾಯಂದಿರುಗಳಿಗೆ ಸ್ಪರ್ಧಿಸಲು ಅವಕಾಶ ಸಹ ಇರಲಿಲ್ಲ. ಜೊತೆಗೆ ವಿಜೇತರು ಮಿಸ್ ಯೂನಿವರ್ಸ್ ಆಗಿ ಆಳ್ವಿಕೆ ಮಾಡುವಾಗ ಗರ್ಭಿಣಿಯಾಗಿರಬಾರದು ಎಂಬ ನಿಯಮವನ್ನೂ ಸಹ ಹೇರಲಾಗಿತ್ತು. ಆದರೆ, ಇದೀಗ ಈ ನಿಯಮ ಬದಲಾಗಿದೆ.