ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಡಿ. ಸತ್ಯಪ್ರಕಾಶ್ ನಿರ್ದೇಶನದ ಹೊಸ ಸಿನಿಮಾ 'ಮ್ಯಾನ್ ಆಫ್ ದಿ ಮ್ಯಾಚ್'. ಪುನೀತ್ ರಾಜ್‍ಕುಮಾರ್ ಅವರ ಪಿಆರ್‌ಕೆ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮೇ 5ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ. ಅಲ್ಲದೇ ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದೆ. ಇದರ ಬೆನ್ನಲ್ಲೇ ಪ್ರತಿಷ್ಠಿತ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಫೆಸ್ಟಿವಲ್‍ಗೆ ಆಯ್ಕೆಯಾಗಿದೆ.
ಫೆಸ್ಟಿವಲ್ ಆಫ್ ಸಿನಿಮಾ ತನ್ನ ಆರನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು, 2022 ಆಗಸ್ಟ್ 5 ರಿಂದ 14ರವರೆಗೆ ನಡೆಯಲಿದೆ. ಕೋವಿಡ್ ನಂತರ ಮೊದಲ ಬಾರಿಗೆ, ಫಿಸಿಕಲ್ ಆಗಿ ನಡೆಯಲಿರುವ ಫೆಸ್ಟಿವಲ್, ನ್ಯೂಯಾರ್ಕ್‌ನ ಕ್ವೀನ್ಸ್‌ನಲ್ಲಿರುವ ರೀಗಲ್ ಯೂಎ ಮಿಡ್‌ವೇ ಥಿಯೇಟರ್ನಲ್ಲಿ ನಡೆಯಲಿದೆ. ಚಲನಚಿತ್ರವನ್ನು ನೋಡಿದ ವಿಮರ್ಶಕ, ಲಾರೆನ್ಸ್ ವೈಟ್ನರ್, ನಿರ್ದೇಶಕರನ್ನ ಅಭಿನಂದಿಸಿ ಟ್ವೀಟ್ ಮಾಡಿ 'ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‍ಗಾಗಿ ನೋಡಿದ ಒಂದು ಅದ್ಭುತವಾದ ಭಾರತೀಯ ವ್ಯಂಗ್ಯಭರಿತ ಚಿತ್ರ. ನಾನು ಅದಕ್ಕೆ 10/10 ನೀಡಿದ್ದೇನೆ' ಎಂದು ಹೇಳಿದ್ದಾರೆ.
ರಾಮಾರಾಮಾ ರೇ ಮತ್ತು ಒಂದಲ್ಲಾ ಎರಡಲ್ಲಾ ಸಿನಿಮಾಗಳ ಯಶಸ್ಸಿನ ನಂತರ ಸತ್ಯ ಪ್ರಕಾಶ್ ನಿರ್ದೇಶಿಸಿರುವ ಮೂರನೇ ಚಿತ್ರವೇ ಮ್ಯಾನ್ ಆಫ್ ದಿ ಮ್ಯಾಚ್. ಸತ್ಯ ಮತ್ತು ಮಯೂರ ಪಿಕ್ಚರ್ಸ್ ಸಹಯೋಗದಲ್ಲಿ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸಿದೆ.