ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೂ ಮುಂಚೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಬ್ಯುಸಿನೆಸ್ ಮಾಡಿದೆ. ಈ ಮೂಲಕ ಓವರ್‌ಸೀಸ್ ಮಾರುಕಟ್ಟೆಯಲ್ಲಿ ದಾಖಲೆಯ ಮೊತ್ತಕ್ಕೆ ವ್ಯಾಪಾರವಾದ ಮೊದಲ ಕನ್ನಡ ಚಿತ್ರ ಇದಾಗಿದೆ.
ವಿದೇಶಿ ಮಾರುಕಟ್ಟೆಯ 'ವಿಕ್ರಾಂತ್ ರೋಣ' ಚಿತ್ರದ ಹಕ್ಕುಗಳನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದರ ವಿದೇಶಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ಬರೋಬ್ಬರಿ 10 ಕೋಟಿಗೂ ಹೆಚ್ಚು ಮೊತ್ತಕ್ಕೆ ಮಾರಾಟ ಆಗಿದೆಯಂತೆ.
ಈ ಬಗ್ಗೆ ವಿಕ್ರಾಂತ್ ರೋಣ ಸಿನಿಮಾದ ನಿರ್ಮಾಪಕ ಜಾಕ್ ಮಂಜುನಾಥ್ ಮಾತನಾಡಿ, ಸಿನಿಮಾದ ಕಂಟೆಂಟ್ ಯೂನಿವರ್ಸಲ್ ಆಗಿದೆ. ಹೀಗಾಗಿ, ಪ್ರಪಂಚದಾದ್ಯಂತ ಒಂದೇ ಸ್ವರ ಮತ್ತು ತಾಳದಲ್ಲಿ ಕೂರುತ್ತದೆ ಮತ್ತು ಈ ಒಪ್ಪಂದವು ಅದಕ್ಕೆ ಸಾಕ್ಷಿಯಾಗಿದೆ. ಖರೀದಿಯ ಬಗ್ಗೆ ಅತ್ಯಂತ ಸಂತೋಷವಿದೆ. ಇದು ಕನ್ನಡ ಚಿತ್ರಕ್ಕೆ ಅತ್ಯಧಿಕ ಮತ್ತು ಇತರ ದಕ್ಷಿಣ ಭಾರತದ ಭಾಷೆಗಳಿಗೆ ಸಮಾನವಾಗಿದೆ ಎಂದು ಹೇಳಿದರು.
ಓವರ್ ಸೀಸ್ ಮಾರುಕಟ್ಟೆಯಲ್ಲಿ ದಾಖಲೆ ಬರೆದ 'ವಿಕ್ರಾಂತ್ ರೋಣ'
ಈ ಸಿನಿಮಾಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಹಿಂದೆ ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾ ಕಟ್ಟಡದ ಮೇಲೆ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಪೋಸ್ಟರ್ನ ಲಾಂಚ್ ಮಾಡಲಾಗಿತ್ತು. ಕಿಚ್ಚ ವಿಕ್ರಾಂತ್ ರೋಣನಾಗಿ, ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿರೂಪ್ ಭಂಡಾರಿ, ನೀತು ಅಶೋಕ್, ಶ್ರದ್ಧಾ ಶ್ರೀನಾಥ್ ಹೀಗೆ ದೊಡ್ಡ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಜುಲೈ 28ರಂದು ವಿಶ್ವದಾದ್ಯಂತ 3Dಯಲ್ಲಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಲಿದೆ.
ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್
ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿದ್ದು, ಜಾಕ್ ಮಂಜುನಾಥ್ ಅವರ ಶಾಲಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇನ್ವೆನಿಯೊ ಒರಿಜಿನ್ಸ್‌ನ ಅಲಂಕಾರ್ ಪಾಂಡಿಯನ್ ಸಹ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ:'ವಿಕ್ರಾಂತ್ ರೋಣ' ಟೀಸರ್ ರಿಲೀಸ್: ಸಿನಿಮಾ ಬಿಡುಗಡೆ ದಿನಾಂಕ ಬಹಿರಂಗ