ಕೊಚ್ಚಿ (ಕೇರಳ): ಚಲನಚಿತ್ರವೊಂದರ ಬಗ್ಗೆ ನಕಾರಾತ್ಮಕ ವಿಮರ್ಶೆ (negative review) ಮಾಡಿದ್ದಕ್ಕೆ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಹೊಸ ಚಲನಚಿತ್ರಗಳು ಬಿಡುಗಡೆಯಾದಾಗ ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ನಕಾರಾತ್ಮಕವಾಗಿ ಬಿಂಬಿಸುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸುವಂತೆ ಕೇರಳ ಉಚ್ಚ ನ್ಯಾಯಾಲಯವು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ ಎರಡು ವಾರಗಳ ನಂತರ, ಎರ್ನಾಕುಲಂ ಸೆಂಟ್ರಲ್ ಪೊಲೀಸರು ಬುಧವಾರ ಈ ಸಂಬಂಧ ಮೊದಲ ಪ್ರಕರಣ ದಾಖಲಿಸಿದ್ದಾರೆ ಮತ್ತು ಒಂಬತ್ತು ಜನರ ವಿರುದ್ಧ ಆರೋಪ ಹೊರಿಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಫೇಸ್ಬುಕ್, ಯೂಟ್ಯೂಬ್ ಮತ್ತು ಇತರ ಏಳು ಮಂದಿಯನ್ನು ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಚಲನಚಿತ್ರವೊಂದರ ಬಗ್ಗೆ ನೆಗೆಟಿವ್ ರಿವೀವ್ ಮಾಡಿದ್ದಕ್ಕೆ ಎಫ್ಐಆರ್ ದಾಖಲಾಗುತ್ತಿರುವುದು ದೇಶದಲ್ಲಿ ಇದೇ ಪ್ರಥಮ ಬಾರಿ ಅನಿಸುತ್ತದೆ.
ಇತ್ತೀಚೆಗೆ ಬಿಡುಗಡೆಯಾದ ತಮ್ಮ ಮಲಯಾಳಂ ಚಿತ್ರ "ರಾಹೆಲ್ ಮಕಾನ್ ಕೋರಾ" ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ವಿಮರ್ಶೆಗಳು ಬರುತ್ತಿರುವುದನ್ನು ಕಂಡ ನಂತರ ಚಲನಚಿತ್ರ ನಿರ್ದೇಶಕ ಉಬೈನಿ ಇಬ್ರಾಹಿಂ ನೀಡಿದ ದೂರಿನ ಆಧಾರದ ಮೇಲೆ ಎರ್ನಾಕುಲಂ ಸೆಂಟ್ರಲ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.