ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 10' ಬಹುತೇಕ ಕೊನೆ ಹಂತ ತಲುಪಿದೆ. ಫಿನಾಲೆಗೆ ಕೆಲ ದಿನಗಳು ಉಳಿದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚುತ್ತಿದೆ. ಇಷ್ಟು ದಿನಗಳ ಕಾಲ ಜಗಳ, ಮನಸ್ತಾಪ, ವಾದ ವಿವಾದಗಳಿಂದಲೇ ಕೂಡಿರುತ್ತಿದ್ದ ಬಿಗ್ ಬಾಸ್ ಮನೆಯೊಳಗೆ ಈ ವಾರ ಭಾವುಕ ಕ್ಷಣಗಳ ವಾತಾವರಣ ಸೃಷ್ಟಿಯಾಗಿದೆ.
ಬಿಗ್ ಬಾಸ್ ಪ್ರೋಮೋ:ಇಷ್ಟು ದಿನಗಳ ಕಾಲ ಮನೆಯವರಿಂದ ದೂರವಿದ್ದ ಬಿಗ್ ಬಾಸ್ ಸದಸ್ಯರಿಗೆ ಸಿಹಿ ಸರ್ಪೈಸ್ಗಳು ಸಿಗುತ್ತಿವೆ. ಸ್ಪರ್ಧಿಗಳ ಅಮ್ಮಂದಿರು ತಮ್ಮ ಮಕ್ಕಳನ್ನು ಭೇಟಿ ಆಗುತ್ತಿದ್ದಾರೆ. ಅಲ್ಲದೇ ಮನೆಯ ಕ್ಯಾಪ್ಟನ್ಸಿ ಟಾಸ್ಕ್‌ನ ಭಾಗವಾಗಲೂ ಬಿಗ್ ಬಾಸ್ ಮನೆ ಮಂದಿಯ ಬಂಧುಗಳಿಗೆ ಅವಕಾಶ ನೀಡುತ್ತಿದ್ದಾರೆ. ಇಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋ ಕೂಡ ಅಂಥದ್ದೇ ಮತ್ತೊಂದು ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿದೆ. 'ತಾರೆಯಂತೆ ಮಿನುಗಿ ಮಾಯವಾದರಾ ಕಾರ್ತಿಕ್ ತಾಯಿ?' ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಳಗೊಂಡಿದೆ.
ಎಲ್ಲರೂ ಮನೆಯ ಚಟುವಟಿಕೆಗಳಲ್ಲಿ ನಿರತರಾಗಿದ್ದಾಗ, 'ನನ್ನ ಮುದ್ದು ತಾರೆ; ನಗುತಲಿ ಬಾರೆ' ಎಂಬ ಹಾಡು ಮನೆಯೊಳಗೆ ಮೊಳಗಿದೆ. ಈ ಧ್ವನಿಯ ಗುರುತು ಹಿಡಿದ ಕಾರ್ತಿಕ್, ಖುಷಿಯಿಂದ ಜಿಗಿಯುತ್ತಾ 'ಅಮ್ಮಾ.....' ಎಂದು ಓಡಿಹೋಗಿ ಶರ್ಟ್ ಧರಿಸಿ ಬಂದಿದ್ದಾರೆ. ಆದರೆ ಅಮ್ಮನೊಡನೆ ಮಾತನಾಡಲು ಕಾಯುತ್ತಿದ್ದ ಕಾರ್ತಿಕ್ ಅವರಿಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ಬಿಗ್ ಬಾಸ್ ಎಲ್ಲರಿಗೂ 'ಪಾಸ್' ಹೇಳಿದ್ದಾರೆ. ಹಾಗಾಗಿ ಕಾರ್ತಿಕ್ ಸೇರಿದಂತೆ ಎಲ್ಲರೂ ನಿಂತಲ್ಲೇ ನಿಶ್ಚಲರಾಗಿದ್ದಾರೆ. ಆಗ ಮನೆಯೊಳಗೆ ಬಂದ ಕಾರ್ತಿಕ್ ಅವರ ಅಮ್ಮ, ಕಾರ್ತಿಕ್ ಅವರ ಕೆನ್ನೆ ಸವರಿ, 'ನಾವೆಲ್ಲರೂ ಚೆನ್ನಾಗಿದ್ದೇವೆ. ಅಳಬೇಡ ನೀನು' ಎಂದಷ್ಟೇ ಹೇಳಿದ್ದಾರೆ.